ಶನಿವಾರ, 24 ಅಕ್ಟೋಬರ್ 2026

ಅಡ್ಡ ಮತದಾನ ಆರೋಪ- ಆಣೆ, ಪ್ರಮಾಣ ಮಾಡಲು ಧರ್ಮಸ್ಥಳಕ್ಕೆ ಬಂದ ಬಿಜೆಪಿ ಶಾಸಕ!!

ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬಿಜೆಪಿಯು ಧರ್ಮಸ್ಥಳದಲ್ಲಿ ಶಾಸಕರಿಗೆ ಆಣೆ- ಪ್ರಮಾಣವನ್ನು ಏರ್ಪಡಿಸಿತ್ತು. ಆದರೆ ಇದಕ್ಕೆ ಆಕ್ಷೇಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದನ್ನು ಪಕ್ಷವು ಕೈ ಬಿಟ್ಟಿತ್ತು. ಇದರ ಹೊರತಾಗಿಯೂ  ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹೆಚ್‌.ಕೆ.ಸುರೇಶ್‌ ಅವರು ಆಣೆ-ಪ್ರಮಾಣ ಮಾಡಲು ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಅಡ್ಡ ಮತದಾನ ಸಾಬೀತ್ ಆದ ಬಳಿಕ ಬೇಲೂರು ಶಾಸಕ ಎಚ್ ಕೆ ಸುರೇಶ್ ಅವರ ಮೇಲೆ ಆರೋಪಗಳು ಕೇಳಿ ಬಂದಿದ್ದವು. ಈ ವೇಳೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕ ಸುರೇಶ್ ಅವರು ನಾನು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡುತ್ತೇನೆ ಎಂದು ಅಂದೇ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದು ಅವರು ತಮ್ಮ ಬೆಂಬಲಿಗರೊಂದಿಗೆ ಧರ್ಮಸ್ಥಳದತ್ತ ಪ್ರಯಾಣ ಬೆಳೆಸಿದ್ದಾರೆ.

ಧರ್ಮಸ್ಥಳದ (Dharmasthala) ಶ್ರೀ ಮಂಜುನಾಥಸ್ವಾಮಿ ಮೇಲೆ ಆಣೆ-ಪ್ರಮಾಣ ಮಾಡಲು ನೂರಾರು ಬೆಂಬಲಿಗರು, ಕಾರ್ಯಕರ್ತರ ಜೊತೆ ಶಾಸಕ ಸುರೇಶ್‌ ಹೊರಟಿಸಿದ್ದಾರೆ. ಇದಕ್ಕೂ ಮುನ್ನ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ದೇವಾಲಯದ ಆವರಣದಲ್ಲಿರುವ ಬಲಿ ಕಲ್ಲಿನ ಮೇಲೆ ಆಣೆ ಮಾಡಿದರು.