ಬೆಂಗಳೂರಿನ ಉದ್ಯಮಿಯ ಪುತ್ರ ಅದ್ವೈತ್ ಉಪಾಧ್ಯಾಯ ಎರಡು ವಾರಗಳ ಹಿಂದೆ ತಾಲೂಕಿನ ಶಿವಗಂಗೆ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಬೆಟ್ಟದ ಮೇಲಾಸನಕ್ಕೆ ತೆರಳಿದವರ ಸುಳಿವು ಸಿಗದೆ, ಪೊಲೀಸರು ಡ್ರೋನ್ ಕ್ಯಾಮೆರಾ ಬಳಸಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಕೇಸ್ ಕೇಸ್ ಇದೀಗ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಇದೀಗ i ಅದ್ವೈತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಯಲ್ಲಿ ಮಹತ್ವದ ತಿರುವು ಸಿಕ್ಕಿದೆ.
ಅದ್ವೈತ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಇದುವರೆಗೆ ಯಾವುದೇ ಖಚಿತ ಕುರುಹು ಸಿಕ್ಕಿಲ್ಲ. ಅದೇ ರೀತಿ ಆತ ದೈಹಿಕವಾಗಿ ಬೆಟ್ಟದಿಂದ ಹೊರಹೋಗಿರುವ ಬಗ್ಗೆಯೂ ಸ್ಪಷ್ಟ ಮಾಹಿತಿ ಪೊಲೀಸರಿಗೆ ಲಭ್ಯವಾಗಿಲ್ಲ. ಎರಡು ವಾರ ಕಳೆದರೂ ಅದ್ವೈತ್ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಇದೀಗ ಆತನ ದಿನಚರಿ, ಹವ್ಯಾಸ, ಸ್ನೇಹ-ಸಂಪರ್ಕ ಹಾಗೂ ಆಧ್ಯಾತ್ಮಿಕ ಆಸಕ್ತಿ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ತನಿಖೆ ವೇಳೆ ಪೊಲೀಸರು ಅದ್ವೈತ್ನ ದಿನಚರಿ, ಹವ್ಯಾಸ ಮತ್ತು ವೈಯಕ್ತಿಕ ಆಸಕ್ತಿಗಳ ಕುರಿತು ಕೂಲಂಕುಷವಾಗಿ ಮಾಹಿತಿ ಸಂಗ್ರಹಿಸಿದ್ದಾರೆ. ಅವನ ದಿನನಿತ್ಯದ ಚಟುವಟಿಕೆಗಳು, ಯಾರೊಂದಿಗೆ ಸಂಪರ್ಕದಲ್ಲಿದ್ದ, ಯಾವ ಸ್ಥಳಗಳಿಗೆ ಭೇಟಿ ನೀಡುತ್ತಿದ್ದ ಮತ್ತು ಯಾವ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಎಂಬುದನ್ನು ಆಧರಿಸಿ ಪೊಲೀಸರು ತನಿಖೆಯ ದಿಕ್ಕನ್ನು ಬದಲಿಸಿದ್ದಾರೆ.ಅದ್ವೈತ್ ಆಗಾಗ ಕೆಲವು ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಸಂಬಂಧಿತರೊಂದಿಗೆ ಚರ್ಚಿಸುತ್ತಿದ್ದ ಎನ್ನಲಾಗಿದೆ. ಅದರಲ್ಲೂ ಓಶೋ ವಿಚಾರಗಳಿಂದ ಮತ್ತು ಓಶೋ ಅವರ ತತ್ವಗಳಿಂದ ಆತ ಪ್ರಭಾವಿತನಾಗಿದ್ದ ಎನ್ನುವ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಓಶೋ ಹಾಗೂ ಅವರ ವಿಚಾರಧಾರೆಗೆ ಸಂಬಂಧಿಸಿದ ಕೆಲವು ಪುಸ್ತಕಗಳು ಅದ್ವೈತ್ ಬಳಿ ಇದ್ದವು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶಿವಗಂಗೆ ಸುತ್ತಮುತ್ತಲಿನ ಆಶ್ರಮಗಳು ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಸ್ಥಳಗಳ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ.ಕೆಲ ದಿನಗಳ ಕಾಲ ಯಾರಿಗೂ ತಿಳಿಯದಂತೆ ಉಳಿದುಕೊಳ್ಳಬಹುದಾದ ಸ್ಥಳಗಳು ಅಥವಾ ವ್ಯಕ್ತಿಗಳೊಂದಿಗೆ ಅದ್ವೈತ್ ಸಂಪರ್ಕ ಹೊಂದಿದ್ದನೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದ್ವೈತ್ನ ಹಿಂದಿನ ಚಲನವಲನ, ಸಂಪರ್ಕಗಳು ಹಾಗೂ ಆತನಿಗೆ ಪರಿಚಯವಿದ್ದ ವ್ಯಕ್ತಿಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ತನಿಖೆಯಲ್ಲಿ ಮತ್ತೊಂದು ಮಹತ್ವದ ಅಂಶವೂ ಹೊರಬಿದ್ದಿದೆ. ಅದ್ವೈತ್ ನಿರಂತರವಾಗಿ ಹಲವು ಡೇಟಿಂಗ್ ಆಯಪ್ ಬಳಸುತ್ತಿದ್ದ ಎನ್ನಲಾಗಿದೆ.
ಈ ಪೈಕಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾಗಿದ್ದ ಯುವತಿಯೊಬ್ಬರೊಂದಿಗೆ ಆತ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಕಳೆದ ಮೂರು ತಿಂಗಳಿನಿಂದ ಆ ಯುವತಿಯೊಂದಿಗೆ ಅದ್ವೈತ್ ಬೆಟ್ಟ ಸೇರಿದಂತೆ ಹಲವು ಕಡೆ ಓಡಾಡಿದ್ದ ಎನ್ನಲಾಗಿದ್ದು, ಇದೀಗ ಪೊಲೀಸರು ಆಕೆಯಿಂದ ಆತನ ಇತ್ತೀಚಿನ ಚಲನವಲನಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.ತನಿಖಾ ಮೂಲಗಳ ಪ್ರಕಾರ, ಅದ್ವೈತ್ ಹಾಗೂ ಆ ಯುವತಿಯ ನಡುವೆ Osho Thoughts ಮಾತ್ರವಲ್ಲದೆ ಆತ್ಮಹತ್ಯೆಯಂತಹ ಸೂಕ್ಷ್ಮ ವಿಚಾರಗಳ ಬಗ್ಗೆಯೂ ಚರ್ಚೆ ನಡೆದಿತ್ತೆಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆತನ ಮಾನಸಿಕ ಸ್ಥಿತಿ, ಇತ್ತೀಚಿನ ಮಾತುಕತೆಗಳು ಹಾಗೂ ವೈಯಕ್ತಿಕ ಜೀವನದ ಹಲವು ಆಯಾಮಗಳನ್ನು ಪರಿಶೀಲಿಸುತ್ತಿದ್ದಾರೆ. ಡೇಟಿಂಗ್ ಆಯಪ್ ಮೂಲಕ ಸಂಪರ್ಕದಲ್ಲಿದ್ದ ಇತರ ಯುವತಿಯರನ್ನೂ ಪೊಲೀಸರು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.




