ಶನಿವಾರ, 24 ಅಕ್ಟೋಬರ್ 2026

ಮುಸ್ಲಿಮರಿಂದಲೇ ದೇಶದಲ್ಲಿ ಬೋಗಸ್ ವೋಟಿಂಗ್, ಹಿಂದೂಗಳು ಕಾನೂನು ಮೀರಲ್ಲ – ಬಸನಗೌಡ ಪಾಟೀಲ್ ಯತ್ನಾಳ್

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತದಾರರ ಪಟ್ಟಿ ಪರಿಷ್ಕರಣೆ ಅಥವಾ ಎಸ್‌ಐಆರ್ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಅತ್ಯಂತ ಕಟುವಾದ ದಾಳಿ ನಡೆಸಿದ್ದಾರೆ. ಮುಸ್ಲಿಂ ಸಮುದಾಯದವರು ಬೃಹತ್ ಪ್ರಮಾಣದಲ್ಲಿ ಬೋಗಸ್ ಮತದಾನ ಮಾಡುತ್ತಿದ್ದಾರೆ ಮತ್ತು ಈ ಮೂಲಕ ದೇಶವನ್ನು ಪಾಕಿಸ್ತಾನ ಮಾಡಲು ಷಡ್ಯಂತರ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಕಾಂಗ್ರೆಸ್ ನಾಯಕರ ನಡೆಯನ್ನು ಹತಾಶೆಯ ಪ್ರತೀಕ ಎಂದು ಬಣ್ಣಿಸಿದ್ದಾರೆ. ಅಲ್ಲದೆ ಮತದಾನದ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಬಿಚ್ಚಿಟ್ಟ ಯತ್ನಾಳ್, ಮುಸ್ಲಿಂ ಮತದಾರರು ಬುರ್ಖಾ ಧರಿಸಿಕೊಂಡು ಬಂದು ಒಬ್ಬರೇ ಹತ್ತು ಜನರ ಹೆಸರಿನಲ್ಲಿ ವೋಟ್ ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಹಿಂದೂಗಳಿಗೆ ಇಂತಹ ಧೈರ್ಯವಿಲ್ಲ ಮತ್ತು ಅವರು ಯಾವತ್ತೂ ದೇಶದ ಕಾನೂನನ್ನು ಮೀರುವುದಿಲ್ಲ ಎಂದರು.

ಕಾಂಗ್ರೆಸ್ ಪಕ್ಷವು ಕೇವಲ ವೋಟ್ ಬ್ಯಾಂಕ್ ಗಾಗಿ ಇಂತಹ ಬೋಗಸ್ ಮತದಾನಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಜಾರಿಯಾಗದಿದ್ದರೆ ಅಲ್ಲಿನ ಪರಿಸ್ಥಿತಿ ಇನ್ನಷ್ಟು ಭೀಕರವಾಗಿರುತ್ತಿತ್ತು ಎಂದು ಅವರು ಎಚ್ಚರಿಸಿದರು. ಕಾಂಗ್ರೆಸ್ ಪಕ್ಷದ ಇಬ್ಬಂದಿ ನೀತಿಯನ್ನು ಪ್ರಶ್ನಿಸಿದ ಯತ್ನಾಳ್, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅವರಿಗೆ ಇವಿಎಂ ಮೇಲೆ ಯಾವುದೇ ಅನುಮಾನವಿರಲಿಲ್ಲ. ಆದರೆ ಈಗ ಸೋಲುವ ಭೀತಿ ಎದುರಾದ ತಕ್ಷಣ ಬ್ಯಾಲೆಟ್ ಪೇಪರ್ ಬೇಕು ಎಂದು ರಾಗ ತೆಗೆದಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಕಾಂಗ್ರೆಸ್ ನಾಯಕರು ಅಸಾಂವಿಧಾನಿಕ ಪದಗಳನ್ನು ಬಳಸುತ್ತಿರುವುದು ಖಂಡನೀಯ ಎಂದು ಅವರು ಕಿಡಿಕಾರಿದರು.