ಶನಿವಾರ, 24 ಅಕ್ಟೋಬರ್ 2026

ಬೆಳ್ತಂಗಡಿ : 20 ವರ್ಷಗಳ ಬಳಿಕ 105 ವರ್ಷದ ತಾಯಿ, 85 ರ ಮಗಳ ಭಾವುಕ ಭೇಟಿ!!

ಮಗುವಿನ ಮನಸ್ಸಿನ ತಾಯಿ -ಮಗಳಿಬ್ಬರು ತಮ್ಮ ಇಳಿ ವಯಸ್ಸಿನಲ್ಲಿ ಬರೋಬ್ಬರಿ 20 ವರ್ಷಗಳ ಬಳಿಕ ಒಬ್ಬರನ್ನೊಬ್ಬರು ಭೇಟಿಯಾಗಿರುವಂತಹ ಅಪರೂಪದ ಘಟನೆ ಎಂದು ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮಲವಂತಿಕೆ ಗ್ರಾಮದ ‘ಮಕ್ಕಿ’ ಎಂಬ ಗ್ರಾಮದಲ್ಲಿ ಬಲು ಅಪರೂಪದ ಘಟನೆ ಯನ್ನು ನಡೆದಿದ್ದು 105 ವರ್ಷದ ತಾಯಿ ಹಾಗೂ 85 ವರ್ಷದ ಮಗಳು ಬರೋಬ್ಬರಿ 20 ವರ್ಷಗಳ ಬಳಿಕ ಒಬ್ಬರನ್ನೊಬ್ಬರು ಭೇಟಿಯಾಗಿದ್ದಾರೆ. 

ವಯೋಸಹಜ ಅನಾರೋಗ್ಯ ಹಾಗೂ ದುರ್ಗಮ ದಾರಿಯ ಕಾರಣದಿಂದ ತಾಯಿಯನ್ನು ನೋಡಬೇಕೆಂಬ ಆಸೆ ಇದ್ದರೂ ಮಗಳು ಸುಶೀಲ ಅವರಿಗೆ ತಾಯಿಯ ಬಳಿ ಬರಲು ಸಾಧ್ಯವಾಗಿರಲಿಲ್ಲ. ಇತ್ತ ತಾಯಿ ಸೀತಮ್ಮನಿಗೆ ಬರೋಬ್ಬರಿ 105 ವರ್ಷಗಳಾಗಿರುವ ಕಾರಣ ಎದ್ದು ಓಡಾಡಲಾಗದೆ ತನ್ನ ಮಗಳನ್ನು ಭೇಟಿ ಮಾಡಲು ಆಗಿರಲಿಲ್ಲ. ಕೊನೆಗೆ ಸುಶೀಲ ಅವರು ತಮ್ಮ ತಾಯಿಯನ್ನು ನೋಡಬೇಕು ಎಂಬ ಮನದ ಹಿಂಗಿತವನ್ನು ತನ್ನ ಮೊಮ್ಮಕ್ಕಳ ಬಳಿ ವ್ಯಕ್ತಪಡಿಸಿದಾಗ ಮೊಮ್ಮಕ್ಕಳು ಅಜ್ಜಿಯ ಆಸೆಯನ್ನು ಈಡೇರಿಸಿ, ಮುತ್ತಜ್ಜಿಯ ಬಳಿ ಕರೆದೊಯ್ಯುವ ಮೂಲಕ ಅಪರೂಪದ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ

ಮಕ್ಕಿಯಲ್ಲಿ ಮಕ್ಕಳೊಂದಿಗೆ ವಾಸವಿರುವ 105 ವರ್ಷದ ಸೀತಮ್ಮ ಅವರಿಗೆ 11 ಮಂದಿ ಮಕ್ಕಳು. ಅವರಲ್ಲಿ ಮೊದಲನೆಯವರೇ 85 ವರ್ಷದ ಸುಶೀಲಾ. ಸೀತಮ್ಮ ಅವರ ಮನೆಗೆ ತೆರಳಲು ಸರಿಯಾದ ರಸ್ತೆಯಿಲ್ಲ. ಜೀಪಿನಲ್ಲಿ ದಟ್ಟ ಕಾಡಿನ ಹಾದಿಯಲ್ಲಿ ಸಾಗಿ, ಬಳಿಕ ಒಂದೂವರೆ ಕಿಲೋಮೀಟರ್ ಬೆಟ್ಟ ಇಳಿದು, ಬಂಡೆ ಹತ್ತಿ, ಹೊಳೆ ದಾಟಿಯೇ ಸಾಗಬೇಕು. ಸುಶೀಲಾ ಅವರು ತಮ್ಮ ಮಕ್ಕಳ ಜೊತೆ ಮಿತ್ತಬಾಗಿಲು ಗ್ರಾಮದ ‘ಫಗರೆ’ ಎಂಬಲ್ಲಿ ವಾಸವಿದ್ದಾರೆ. ಹೀಗಾಗಿ, ದೂರದಲ್ಲಿದ್ದ ತಾಯಿ-ಮಗಳು ಒಂದಾಗಿ ಸುಮಾರು 20 ವರ್ಷಗಳೇ ಕಳೆದುಹೋಗಿದ್ದವು. ಮನಸ್ಸಿನಲ್ಲಿ ಕೇವಲ ಹಳೆಯ ನೆನಪುಗಳಷ್ಟೇ ಉಳಿದಿದ್ದವು. ಆದರೆ ಈ ಆಸೆಯನ್ನು ಮಕ್ಕಳ ಬಳಿ ಹೇಳಿದಾಗ ಅವರು ತಮ್ಮ ಅಜ್ಜಿಯ ಆಸೆಯನ್ನು ಈಡೇರಿಸಲು ಪಣತೊಟ್ಟಿದ್ದಾರೆ. ಹೀಗಾಗಿ ಬೆಳಗಿನ ಸಮಯ ಅಜ್ಜಿ ಸುಶೀಲಾ ಅವರನ್ನು ಮನೆಯಿಂದ ಜೀಪಿನಲ್ಲಿ ದಟ್ಟ ಕಾಡಿನ ಕಲ್ಲು-ಮಣ್ಣಿನ ಕಚ್ಚಾ ರಸ್ತೆಯಲ್ಲಿ ಕರೆದೊಯ್ಯಲಾಯಿತು. ವಾಹನ ಸಾಗದ ಹಾದಿಯಲ್ಲಿ ಅಜ್ಜಿಯನ್ನು ಕಾಡುದಾರಿಯಲ್ಲಿ ನಿಧಾನವಾಗಿ ನಡೆಸಿಕೊಂಡು ಹೋಗಲಾಯಿತು. ಕಾಡಿನಲ್ಲಿ ಸಾಗುವಾಗ ಉಣ್ಣೆ/ಉಂಬುರು ಕಾಲಿನ ರಕ್ತ ಹೀರಿದರೂ, ತಾಯಿಯನ್ನು ನೋಡುವ ತವಕದಲ್ಲಿದ್ದ ಅಜ್ಜಿಗೆ ಆ ನೋವು ಲೆಕ್ಕಕ್ಕೇ ಬರಲಿಲ್ಲ. ನಗುನಗುತ್ತಲೇ ಬೆಟ್ಟ-ಗುಡ್ಡ ಹತ್ತಿ, ಹೊಳೆ ದಾಟಿ ಸಾಗಿದರು.

20 ವರ್ಷಗಳ ನಂತರ ತಾಯಿಯನ್ನು ಕಂಡ ಸುಶೀಲಾ ಅವರ ಕಣ್ಣಂಚಿನಲ್ಲಿ ಆನಂದಭಾಷ್ಪ ಹರಿಯಿತು. ವಯಸ್ಸಿನ ಕಾರಣದಿಂದ ಸೀತಮ್ಮ ಅವರ ನೆನಪುಗಳು ಮಸುಕಾಗಿದ್ದರೂ, ಮಗಳನ್ನು ಕಂಡ ಕ್ಷಣದಲ್ಲಿ ಪ್ರೀತಿ ಉಕ್ಕಿಬಂತು. ದಿನವಿಡೀ ತಾಯಿಯ ಜೊತೆಗಿದ್ದ ಮಗಳು ಸುಶೀಲಾ, ವೀಳ್ಯದೆಲೆ ಅಗಿಯುತ್ತಾ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಮೊಮ್ಮಕ್ಕಳು ಅಜ್ಜಿಯ ಕಥೆಯನ್ನು ಆಲಿಸಿ ಆನಂದಿಸಿದರು. ಈ ಮೂಲಕ ಎರಡು ದಶಕಗಳ ಅಂತರ ಆ ಒಂದೇ ದಿನದ ಭೇಟಿಯಲ್ಲಿ ಕರಗಿಹೋಯಿತು.