ಶಬರಿಮಲೆಯಲ್ಲಿ ಪಡಿಪೂಜೆ ಬುಕಿಂಗ್ ಕುರಿತಂತೆ ತಿರುವಾಂಕೂರು ದೇವಸ್ವಂ ಮಂಡಳಿ ಕೆಲವೊಂದು ಪ್ರಮುಖ ನಿರ್ಧಾರವನ್ನು ಕೈಗೊಂಡಿದೆ. ಇನ್ನು ಮುಂದೆ ಶಬರಿಮಲೆಯಲ್ಲಿ ದಿನಕ್ಕೆ ಐದು ಪಡಿಪೂಜೆಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಮಂಡಳಿಯ ಕೇರಳ ಹೈಕೋರ್ಟ್‌ನ ದೇವಸ್ವಂ ಪೀಠಕ್ಕೆ ಮಾಹಿತಿ ನೀಡಿದೆ.
ಈಗಾಗಲೇ ಕಾಯ್ದಿರಿಸಲಾದ ಪಡಿಪೂಜೆಗಳು ಪೂರ್ಣಗೊಂಡ ಬಳಿಕ ಹೊಸ ಬುಕಿಂಗ್‌ಗಳನ್ನು ಸ್ವೀಕರಿಸಲಾಗುವುದು ಹಾಗೂ ಈಗಾಗಲೇ ಬುಕ್ ಮಾಡಿರುವ ಭಕ್ತರ ಹೆಸರುಗಳನ್ನು ಡಿಜಿಟಲೀಕರಣಗೊಳಿಸಿ, ಮೃತ ವ್ಯಕ್ತಿಗಳ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗುವುದು ಎಂದು ಮಂಡಳಿ ಹೇಳಿದೆ.
ಪಡಿಪೂಜೆ ಎಂಬುದು ಶಬರಿಮಲೆ ಶ್ರೀ ಧರ್ಮಶಾಸ್ತ ದೇವಾಲಯದಲ್ಲಿ ನೆರವೇರಿಸಲಾಗುವ ಅತ್ಯಂತ ಪವಿತ್ರವಾದ ಮತ್ತು ವಿಶೇಷವಾದ ಧಾರ್ಮಿಕ ಪೂಜಾ ವಿಧಾನವಾಗಿದೆ. ಮಲಯಾಳಂ ನಲ್ಲಿ ಪಡಿ ಎಂದರೆ ಮೆಟ್ಟಿಲು ಎಂದರ್ಥ. 18 ಪವಿತ್ರ ಮೆಟ್ಟಿಲುಗಳಿಗೆ ಸಲ್ಲಿಸುವ ಪೂಜೆಯನ್ನೇ ಪಡಿಪೂಜೆ ಎಂದು ಕರೆಯಲಾಗುತ್ತದೆ.



