ಶನಿವಾರ, 24 ಅಕ್ಟೋಬರ್ 2026

ಕಟೀಲು ಭ್ರಮರಾಂಬಿಕೆಯ ಮೂಲತಾಣದಲ್ಲಿ ಪ್ರತ್ಯಕ್ಷವಾಯ್ತು ಭ್ರಮರ ರೂಪ: ಆಶ್ಚರ್ಯಚಕಿತರಾದ ಭಕ್ತರು!

Kateel Temple

​ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಹಾಗೂ ಪವಿತ್ರ ಶಕ್ತಿಪೀಠವಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೂಲತಾಣವಾದ ಕುದ್ರುವಿನ ಗುಡಿಯಲ್ಲಿ ಭ್ರಮರ (ದುಂಬಿ) ಪ್ರತ್ಯಕ್ಷವಾಗಿರುವುದು ಭಕ್ತರಲ್ಲಿ ದೈವಿಕ ಅನುಭೂತಿಯನ್ನುಂಟು ಮಾಡಿದೆ. ದೇವಸ್ಥಾನದ ಮೂಲತಾಣವಾದ ಕುದ್ರುವಿನ ಗುಡಿಯ ಒಳಭಾಗದಲ್ಲಿ ಭ್ರಮರ (ದುಂಬಿ) ಪ್ರತ್ಯಕ್ಷವಾಗಿರುವುದು ಭಕ್ತರಲ್ಲಿ ದೈವಿಕ ಅನುಭೂತಿ ಹಾಗೂ ಅಚ್ಚರಿಯನ್ನುಂಟು ಮಾಡಿದೆ.

ಕಟೀಲು ಶ್ರೀದೇವಿಯು ಕ್ಷೇತ್ರದಲ್ಲಿ ಲಿಂಗರೂಪಿಯಾಗಿ ಸಾತ್ವಿಕವಾಗಿ ನೆಲೆಸಿದ್ದಾಳೆ. ಮೂಲಕುದ್ರುವಿನಲ್ಲಿ ದುಂಬಿ ಕಾಣಿಸಿರುವುದು, ನವರಾತ್ರಿ ಉತ್ಸವದ ನಂತರದ ಪ್ರಸನ್ನಕಾಲದಲ್ಲಿ ನಡೆದಿರುವ ಈ ಘಟನೆ ಬಹಳ ವಿಶೇಷ ಎಂದು ಅನಂತಪದ್ಮನಾಭ ಅಸ್ರಣ್ಣನರು ಹೇಳಿದ್ದಾರೆ.
​
ಪುರಾಣಗಳ ಇತಿಹಾಸದ ಪ್ರಕಾರ, ದೇವಿಯು ಭಕ್ತರನ್ನು ಕಾಪಾಡಲು ಮತ್ತು ಅರುಣಾಸುರನೆಂಬ ರಾಕ್ಷಸನನ್ನು ಸಂಹರಿಸಲು ಭ್ರಮರದ (ದುಂಬಿ) ರೂಪವನ್ನು ಧರಿಸಿದ್ದಳು. ಅಂದಿನಿಂದ ದೇವಿಗೆ ‘ಭ್ರಮರಾಂಬಿಕೆ’ ಎಂಬ ಸಾರ್ಥಕ ನಾಮವೂ ಪ್ರಾಪ್ತವಾಯಿತು. ಈಗ ಅದೇ ಮೂಲತಾಣದ ಗುಡಿಯಲ್ಲಿ ದುಂಬಿ ಕಾಣಿಸಿಕೊಂಡಿರುವುದು ಈ ಐತಿಹಾಸಿಕ ಪೌರಾಣಿಕ ಹಿನ್ನೆಲೆಯನ್ನು ಮತ್ತೊಮ್ಮೆ ನೆನಪಿಸಿದೆ.

​ಸಾಮಾನ್ಯವಾಗಿ ದೇವಾಲಯದ ಆವರಣದಲ್ಲಿ ಅಥವಾ ಪ್ರಕೃತಿಯಲ್ಲಿ ಜೀವಿಗಳು ಕಾಣಿಸಿಕೊಳ್ಳುವುದು ಸಹಜವಾದರೂ, ನಿರ್ದಿಷ್ಟವಾಗಿ ಮೂಲತಾಣದಲ್ಲಿ ದುಂಬಿ ಪ್ರತ್ಯಕ್ಷವಾಗಿರುವುದು ಮತ್ತು ಸ್ಥಳದಲ್ಲಿದ್ದವರ ಗಮನ ಸೆಳೆದಿರುವುದು ವಿಶೇಷ ಧಾರ್ಮಿಕ ಮಹತ್ವವನ್ನು ಪಡೆದುಕೊಂಡಿದೆ. ಇದನ್ನು ದೇವಿಯ ಸಾನಿಧ್ಯದ ಅಥವಾ ಪವಿತ್ರ ಸಂಕೇತವೆಂದು ನಂಬಿರುವ ಭಕ್ತರು, ಈ ದೃಶ್ಯವನ್ನು ಕಂಡು ಭಕ್ತಿಭಾವದಿಂದ ನಮಿಸುತ್ತಿದ್ದಾರೆ. ಕ್ಷೇತ್ರದ ಪೂಜಾರಿಗಳು ಹಾಗೂ ಹಿರಿಯರು ಕೂಡ ಈ ಘಟನೆಯು ದೇವಿಯ ಅಲೌಕಿಕ ಶಕ್ತಿ ಹಾಗೂ ಪುರಾಣದ ನೆನಪುಗಳನ್ನು ಜೀವಂತಗೊಳಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.