ಉಜಿರೆ: ಪ್ರಸಿದ್ಧ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಅಂಗವಾಗಿ ಪ್ರೀ-ಕೆ.ಜಿ., ಎಲ್.ಕೆ.ಜಿ., ಯು.ಕೆ.ಜಿ. ಹಾಗೂ ಕಿರಿಯ ತರಗತಿಯ ಪುಟಾಣಿ ಮಕ್ಕಳಿಗಾಗಿ ‘ಕಲರ್ಸ್ ಡೇ’ (ಬಣ್ಣಗಳ ದಿನ) ಯನ್ನು ಅತ್ಯಂತ ವಿನೂತನ ಹಾಗೂ ವೈಭವೋಪೇತವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ಹೆಮ್ಮೆಯ ಬ್ಯಾಂಡ್ ವಾದನದೊಂದಿಗೆ ಪುಟಾಣಿ ಮಕ್ಕಳನ್ನು ಅವರ ಪೋಷಕರ ಸಹಿತವಾಗಿ ಮಹಾದ್ವಾರದಿಂದ ಸಭಾಭವನದವರೆಗೆ ಶಿಸ್ತುಬದ್ಧವಾಗಿ ಕರೆತರಲಾಯಿತು. ತದನಂತರ ಪುಟಾಣಿ ಮಕ್ಕಳ ಸುಂದರವಾದ ಪ್ರಾರ್ಥನಾ ನೃತ್ಯದೊಂದಿಗೆ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳು ಆಗಮಿಸಿದ ಗಣ್ಯರನ್ನು ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿದರು.
ಬಣ್ಣಗಳ ಮಹತ್ವ ಸಾರಿದ ಮುಖ್ಯ ಅತಿಥಿ:
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮೋನಿಕಾ ಇವಾನ್ ಮನೇಜಸ್ ಅವರು, “ಮಕ್ಕಳ ಜೀವನದಲ್ಲಿ ಬಣ್ಣಗಳು ಹಾಗೂ ಅವುಗಳ ಅರ್ಥಶಕ್ತಿ ಅತ್ಯಂತ ಮುಖ್ಯವಾದುದು. ಮಕ್ಕಳನ್ನು ಸದಾ ಪ್ರೀತಿ, ಕಾಳಜಿ ಹಾಗೂ ಪ್ರೋತ್ಸಾಹದೊಂದಿಗೆ ಬೆಳೆಸುವ ಅಗತ್ಯವಿದೆ” ಎಂದು ಪೋಷಕರಿಗೆ ಕರೆ ನೀಡಿದರು.
ಶಾಲೆಯ ಸಂಚಾಲಕರಾದ ಫಾ. ಅಬೀಲ್ ಲೋಬೋ ಮಾತನಾಡಿ, ಕಲರ್ಸ್ ಡೇ ಆಚರಣೆಯ ಉದ್ದೇಶವನ್ನು ವಿವರಿಸಿ, ಪುಟಾಣಿ ಮಕ್ಕಳ ಉತ್ಸಾಹಭರಿತ ಭಾಗವಹಿಸುವಿಕೆ ಹಾಗೂ ಅವರ ಸೃಜನಶೀಲ ಪ್ರಯತ್ನಗಳಿಗೆ ಶ್ಲಾಘನೆ ವ್ಯಕ್ತಪಡಿಸಿದರು.
ಮನಸೂರೆಗೊಂಡ ಸಾಂಸ್ಕೃತಿಕ ವೈಭವ:
ವಿದ್ಯಾರ್ಥಿ ಸುಹಾನ್ ಮೊಂತೇರೊ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ತದನಂತರ ಪುಟಾಣಿ ಮಕ್ಕಳು ವಿವಿಧ ಬಣ್ಣಗಳ ಆಕರ್ಷಕ ವಸ್ತ್ರಾಲಂಕಾರಗಳೊಂದಿಗೆ ನಡೆಸಿದ ಮನಮೋಹಕ ನೃತ್ಯ ಪ್ರದರ್ಶನವು ನೆರೆದಿದ್ದ ಪೋಷಕರು ಮತ್ತು ಅತಿಥಿಗಳ ಮನಸೊರೆಗೊಂಡಿತು. ಈ ಕಾರ್ಯಕ್ರಮವು ಮಕ್ಕಳಲ್ಲಿ ಬಣ್ಣಗಳ ಕುರಿತು ಅರಿವು ಮೂಡಿಸುವುದರ ಜೊತೆಗೆ, ಅವರ ಸೃಜನಶೀಲತೆ ಹಾಗೂ ಕಲಾತ್ಮಕ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಫಾ. ಡಾ. ವಿಜಯ್ ಲೋಬೋ, ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಪ್ರವೀಣ್ ವಿಜಯ್ ಡಿಸೋಜಾ, ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷ ಶಶಿಕಿರಣ್ ಜೈನ್, ಶಿಕ್ಷಕಿ ಗೇಸಿ ಸಲ್ಡಾನ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಬಬಿತಾ ಮೋರಸ್, ಸ್ಟೀವನ್ ಮೊಂತೇರೊ ಮತ್ತು ಜೇಸನ್ ಮೋರಸ್ ಉಪಸ್ಥಿತರಿದ್ದರು.



