ಶನಿವಾರ, 24 ಅಕ್ಟೋಬರ್ 2026

ಅ. 1 LPG ಗ್ಯಾಸ್ ಬುಕ್ಕಿಂಗ್ ಗೆ ಹೊಸ ನಿಯಮ

ಎಲ್ಪಿಜಿ ಮರು ಬುಕ್ಕಿಂಗ್ ಅವಧಿಯನ್ನು 25 ದಿನಗಳಿಗೆ ಇಳಿಸಿದ ಬಳಿಕ ಕೇಂದ್ರ ಸರ್ಕಾರವು ಇದೀಗ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಅಕ್ಟೋಬರ್ 01 ರಿಂದ ಗ್ಯಾಸ್ ಬುಕ್ಕಿಂಗ್ ಗೆ ಆಧಾರ್ ಇ-ಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಒಂದು ವೇಳೆ ಗ್ರಾಹಕರು ಆಧಾರ್ ಇ-ಕೆವೈಸಿ ಮಾಡಿಸದಿದ್ದರೆ ಗ್ಯಾಸ್ ಬುಕ್ ಮಾಡಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲದೆ, ಆಧಾರ್ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್ ಲಭ್ಯವಿರುವುದಿಲ್ಲ.

ದೇಶದಲ್ಲಿ ಇದುವರೆಗೂ 27.43 ಕೋಟಿ ಗ್ರಾಹಕರು ಮಾತ್ರ ಆಧಾರ್ ಇ-ಕೆವೈಸಿ ಮಾಡಿಸಿದ್ದು, ಇನ್ನು 3.16 ಕೋಟಿ ಜನರು ಇ-ಕೆವೈಸಿ ಮಾಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ತೈಲ ಕಂಪನಿಗಳು ಪ್ರಮುಖ ಆಯ್ಕೆಗಳನ್ನು ನೀಡಿವೆ.

ಎಲ್ಲಿ ಮಾಡಿಸುವುದು?

ಮನೆ ಬಾಗಿಲಲ್ಲೇ ಇ-ಕೆವೈಸಿ ಮಾಡಿ 

ಮನೆಗೆ ಸಿಲಿಂಡರ್ ಡೆಲಿವರಿ ಮಾಡಲು ಬರುವ ವ್ಯಕ್ತಿಯ ಮೊಬೈಲ್ ಆ್ಯಪ್‌ನಲ್ಲಿ ಬೆರಳಚ್ಚು (ಬಯೋಮೆಟ್ರಿಕ್) ನೀಡುವ ಮೂಲಕ ಇ-ಕೆವೈಸಿ ಪ್ರಕ್ರಿಯೆಯನ್ನು ಸುಲಭವಾಗಿ ಮುಗಿಸಬಹುದು.

ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ

ಗ್ರಾಹಕರು ತಮ್ಮ ಹತ್ತಿರದ ಗ್ಯಾಸ್ ಏಜೆನ್ಸಿ ಬಳಿಗೆ ನೇರವಾಗಿ ತೆರಳಿ ಆಧಾರ್ ಇ-ಕೆವೈಸಿ ಮಾಡಿಸಬಹುದು.

ಮನೆಯಲ್ಲೇ ಕುಳಿತು ಸೆಲ್ಫ್ ಇ-ಕೆವೈಸಿ

ಗ್ರಾಹಕರು ತಮ್ಮ ಮೊಬೈಲ್ ಆ್ಯಪ್‌ಗಳ ಮೂಲಕ ಮನೆಯಲ್ಲೇ ಕುಳಿತು ಸ್ವತಃ ಇ-ಕೆವೈಸಿ ಮಾಡಿಕೊಳ್ಳಬಹುದು. ಇಂಡಿಯನ್ ಆಯಿಲ್ ಬಳಕೆದಾರರು ‘ಇಂಡಿಯನ್ ಆಯಿಲ್ ಒನ್’ (Indian Oil One), ಭಾರತ್ ಗ್ಯಾಸ್ ಬಳಕೆದಾರರು ‘ಹಲೋ ಬಿಪಿಸಿಎಲ್’ (Hello BPCL) ಮತ್ತು ಹೆಚ್‌ಪಿ ಬಳಕೆದಾರರು ‘ಹೆಚ್ ಪಿ ಪೇ’ (HP Pay) ಆ್ಯಪ್‌ ಮೂಲಕ ಸೆಲ್ಫ್ ಇ-ಕೆವೈಸಿ ಮಾಡಿಕೊಳ್ಳಲು ಅವಕಾಶವಿದೆ