ಶನಿವಾರ, 24 ಅಕ್ಟೋಬರ್ 2026

ಡೇಟ್ ಮಾಡುತ್ತ 67 ವರ್ಷದ ವ್ಯಕ್ತಿಗೆ 1.30 ಲಕ್ಷ ವಂಚನೆ!! ಇಬ್ಬರು ಯುವತಿಯರು ಅರೆಸ್ಟ್‌

ಡೇಟಿಂಗ್ ಆಪ್‌ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ 67 ವರ್ಷದ ವ್ಯಕ್ತಿಯೊಬ್ಬರನ್ನು ವಂಚಿಸಿ 1.30 ಲಕ್ಷ ರೂ. ವಂಚಿಸಿದ್ದು, ಇಬ್ಬರು ಯುವತಿಯರನ್ನು ದೆಹಲಿ ಪೊಲೀಸರು  ಬಂಧಿಸಿದ್ದಾರೆ.

ಬಂಧಿತರನ್ನು ದೆಹಲಿ ನಿವಾಸಿಗಳಾದ ಜ್ಯೋತ್ಸ್ನಾ (26) ಮತ್ತು ಮಾನಸಿ (21) ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿಯ ಪ್ರಕಾರ, ಜ್ಯೋತ್ಸ್ನಾ ಡೇಟಿಂಗ್ ಆಪ್‌ನಲ್ಲಿ ನಕಲಿ ಗುರುತಿನೊಂದಿಗೆ ಪ್ರೊಫೈಲ್ ಸೃಷ್ಟಿಸಿ 67 ವರ್ಷದ ವ್ಯಕ್ತಿಯನ್ನು ಸಂಪರ್ಕಿಸಿದ್ದಳು. ಬಳಿಕ ಆತನೊಂದಿಗೆ ಟೆಲಿಗ್ರಾಂ ಮೂಲಕವೂ ಸಂಪರ್ಕ ಮುಂದುವರಿದಿತ್ತು. ನಂತರ ತನ್ನ ಸಹಚರಿಯನ್ನು ಪರಿಚಯಿಸಿ, ಆನ್‌ಲೈನ್‌ನಲ್ಲಿ ಪರಿಚಯವಾಗಿದ್ದ ಮಹಿಳೆಯೇ ಆಕೆ ಎಂದು ನಂಬಿಸುವಂತೆ ಮಾಡಲಾಗಿತ್ತು.

ಜುಲೈ 20ರಂದು ಇಬ್ಬರು ಆರೋಪಿಗಳು ವ್ಯಕ್ತಿಯನ್ನು ಭೇಟಿಯಾಗಿದ್ದರು. ಜುಲೈ 24ರಂದು ದೆಹಲಿಯ ಡಿಫೆನ್ಸ್ ಕಾಲೋನಿಯ ರೆಸ್ಟೋರೆಂಟ್‌ನಲ್ಲಿ ಮೂವರು ಒಟ್ಟಿಗೆ ಊಟ ಮಾಡಿದ್ದರು. ರೆಸ್ಟೋರೆಂಟ್‌ನಿಂದ ಹೊರಬರುವಾಗ ವ್ಯಕ್ತಿಯ ಮೊಬೈಲ್ ಕಳುವಾಗಿತ್ತು. ಇದಾದ ಬಳಿಕ ಅವರ ಎರಡು ಬ್ಯಾಂಕ್ ಖಾತೆಗಳಿಂದ ಯುಪಿಐ ಮೂಲಕ 1.30 ಲಕ್ಷ ರೂ. ಅವರ ಅನುಮತಿಯಿಲ್ಲದೆ ವರ್ಗಾವಣೆ ಮಾಡಲಾಗಿದೆ ಎಂದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 25ರಂದು ದಕ್ಷಿಣ-ಪಶ್ಚಿಮ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಯಲ್ಲಿ ಇ-ಎಫ್‌ಐಆರ್ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಬ್ಯಾಂಕ್ ವಹಿವಾಟಿನ ವಿವರ, ಫಲಾನುಭವಿ ಖಾತೆಗಳು, ಕೆವೈಸಿ ದಾಖಲೆಗಳು, ಸಿಸಿಟಿವಿ ದೃಶ್ಯಗಳು ಹಾಗೂ ತಾಂತ್ರಿಕ ಮಾಹಿತಿಗಳನ್ನು ಪರಿಶೀಲಿಸಿದ್ದಾರೆ. ವಂಚನೆಯ ಹಣ ಮೊದಲು ಒಬ್ಬ ಆರೋಪಿಯ ಖಾತೆಗೆ ವರ್ಗಾವಣೆಯಾಗಿದ್ದು, ಬಳಿಕ ಮತ್ತೊಬ್ಬ ಆರೋಪಿಯ ಖಾತೆಗೆ ವರ್ಗಾವಣೆಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.