ಮುಂಬೈ, ಆ.20: ವೈದ್ಯರು ಹೆರಿಗೆ ಬಳಿಕ ಬಾಣಂತಿಯ ಹೊಟ್ಟೆಯಲ್ಲಿಯೇ ಗ್ಲೌಸ್ ಹಾಗೂ ಒರೆಸುವ ಬಟ್ಟೆ ಬಿಟ್ಟು ಹೊಲಿಗೆ ಹಾಕಿರುವ ಶಾಕಿಂಗ್ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದ್ದು, 19 ವರ್ಷದ ಬಾಣಂತಿಯ ಹೊಟ್ಟೆಯಲ್ಲಿ ಸರ್ಜಿಕಲ್ ಗ್ಲೌಸ್ ಹಾಗೂ ಒರೆಸುವ ಬಟ್ಟೆಗಳನ್ನು ಬಿಟ್ಟು ಹೊಲಿಗೆ ಹಾಕಿದ್ದು, ಇದೀಗ ಬಾಣಂತಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಆ.1 ರಂದು ಬೀಡ್ ಜಿಲ್ಲಾ ಆಸ್ಪ್ರೆಯಲ್ಲಿ ಸಂಧ್ಯಾ ಸೂರಜ್ ಗಾಯಕ್ವಾಡ್ ಎಂಬ ಯುವತಿಗೆ ಹೆರಿಗೆಯಾಗಿದ್ದು, ನಾಲ್ಕು ದಿನಗಳ ನಂತರ ಮನೆಗೆ ಕಳುಹಿಸಲಾಗಿತ್ತು. ಮನೆಗೆ ಹೋದ ನಂತರ ತೀವ್ರ ಹೊಟ್ಟೆನೋವು ಕಾಣಿಸಿದ್ದು, ಕುಟುಂಬದವರು ಖಾಸಗಿ ಆಸ್ಪತ್ರೆಗೆ ದಾಝಖಲು ಮಾಡಿದ್ದು, ಸ್ಕ್ಯಾನಿಂಗ್ ವೇಳೆ ಹೊಟ್ಟೆಯಲ್ಲಿ ಅನೇಕ ವಸ್ತುಗಳಿರುವುದು ಪತ್ತೆಯಾಗಿದೆ.
ಆಕೆಯ ಹೊಟ್ಟೆಯಲ್ಲಿ ಸರ್ಜಿಕಲ್ ಗ್ಲೌಸ್ ಮತ್ತು ಟಿಶ್ಯೂ ಬಟ್ಟೆಗಳನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ತಪ್ಪಿತಸ್ಥ ವೈದ್ಯರ ವಿರುದ್ಧ ಕಠಿಣ ಕ್ರಮಕ್ಕೆ ಪತಿ ಆಗ್ರಹಿಸಿದ್ದು, ತನ್ನ ಮಗುವನ್ನು ಕೂಡಾ ಎತ್ತಿಕೊಳ್ಳಲೂ ಆಗುತ್ತಿಲ್ಲ ಎಂದು ಮಹಿಳೆಯ ತಾಯಿ ಕಣ್ಣೀರಿಟ್ಟಿದ್ದಾರೆ.
ಈ ಘಟನೆ ಕುರಿತು ಬೀಡ್ ಜಿಲ್ಲಾ ಮುಖ್ಯ ಶಸ್ತ್ರಚಿಕಿತ್ಸಕ ಸತೀಶ್‌ಕುಮಾರ್ ಸೋಲಂಕೆ ಶಸ್ತ್ರಚಿಕಿತ್ಸಾ ತಂಡಕ್ಕೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದು, ವರದಿ ಬಂದ ನಂತರ ಶಿಸ್ತುಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸಾ ವಸ್ತುಗಳು ದೇಹದೊಳಗೆ ಉಳಿದುಕೊಂಡಾಗ ತೀವ್ರ ಸೋಂಕು ಹರಡಿ ಆಂತರಿಕ ಅಂಗಾಂಗಗಳು ವಿಫಲವಾಗುವ ಅಪಾಯವಿರುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ವೇಳೆ ಪ್ರಮಾಣಿತ ಎಣಿಕೆ ಪ್ರೋಟೋಕಾಲ್ ಕಡ್ಡಾಯವಾಗಿದ್ದರೂ, ಇಂತಹ ನಿರ್ಲಕ್ಷ್ಯಗಳು ಮರುಕಳಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.



