ಇಂದು ಮಳೆ ಬರುವುದನ್ನು ಮೊದಲೇ ತಿಳಿಯುವುದು ಅತ್ಯಂತ ಸುಲಭ. ಹವಾಮಾನ ಇಲಾಖೆ, ಉಪಗ್ರಹಗಳು, ರಾಡಾರ್ಗಳು ಮತ್ತು ವೆದರ್ ಆಯಪ್ ಗಳಿಂದ ಮಳೆಯ ಬರುವಿಕೆಯನ್ನು ಇದುವರೆಗೂ ಸುಲಭದಲ್ಲಿ ತಿಳಿಯುತ್ತಿದ್ದೆವು. ಆದರೆ ಇಂದು ಇವುಗಳಿದ್ದರೂ ಒಮ್ಮೊಮ್ಮೆ ಮಳೆಯ ನಿಖರ ಮುನ್ಸೂಚನೆ ನೀಡುವುದು ಸವಾಲಾಗಿದೆ. ಆದರೆ ಸಾವಿರಾರು ವರ್ಷಗಳ ಹಿಂದೆ ಇಂತಹ ಯಾವುದೇ ತಂತ್ರಜ್ಞಾನವಿಲ್ಲದಿದ್ದರೂ ನಮ್ಮ ಪೂರ್ವಜರು ಮಳೆಯ ಸಮಯವನ್ನು ನಿಖರವಾಗಿ ಊಹಿಸುತ್ತಿದ್ದರು. ಅಷ್ಟೇ ಏಕೆ ಕೆಲವು ವರ್ಷಗಳ ಹಿಂದೆ ನಮ್ಮ ಅಜ್ಜ- ಅಜ್ಜಿಯರು ಕೂಡ ಮಳೆ ಬರುವುದನ್ನು ಕರಾರುವಕ್ಕಾಗಿ ಹೇಳುತ್ತಿದ್ದರು.
ಹೌದು, ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಇದು ಇದೆ. ವಾತಾವರಣದಲ್ಲಿ ಉಂಟಾಗುವ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸಿ, “ಇನ್ನೇನು ಮಳೆ ಬರುತ್ತದೆ” ಎಂದು ಹೇಳುತ್ತಿದ್ದ ಹಿರಿಯರ ಮಾತು ಕೆಲವೇ ನಿಮಿಷಗಳಲ್ಲಿ ನಿಜವಾಗುತ್ತಿದ್ದ ಉದಾಹರಣೆಗಳು ಸಾಕಷ್ಟಿವೆ. ಇದು ಕೇವಲ ಊಹೆಯಲ್ಲ, ತಲೆಮಾರುಗಳಿಂದ ಸಂಗ್ರಹವಾಗಿದ್ದ ಅನುಭವದ ಫಲವಾಗಿತ್ತು. ಹಾಗಿದ್ದರೆ ಇವರಿಗೆ ಮಳೆಯ ಬರುವುದು ತಿಳಿಯುತ್ತಿದ್ದುದಾದರೂ ಹೇಗೆ? ಇದು ಇಂದಿಗೂ ಅಚ್ಚರಿಯ ವಿಷಯವಾಗಿದೆ.
ಹಿರಿಯರು ಮಳೆಯ ಆಗಮನ ಕಂಡುಹಿಡಿಯುತ್ತಿದ್ದುದ್ದು ಹೇಗೆ?
ಆಧುನಿಕ ಹವಾಮಾನ ಮುನ್ಸೂಚನಾ ವ್ಯವಸ್ಥೆಗಳೇ ಇಲ್ಲದ ಕಾಲದಲ್ಲಿ ಪ್ರಕೃತಿಯೇ ಅವರ ಮಾರ್ಗದರ್ಶಿಯಾಗಿತ್ತು. ಮೋಡಗಳ ಚಲನೆ, ಗಾಳಿಯ ದಿಕ್ಕು, ವಾತಾವರಣದ ವಾಸನೆ, ತಾಪಮಾನದಲ್ಲಿನ ಬದಲಾವಣೆ, ಪ್ರಾಣಿಗಳ ಹಾಗೂ ಪಕ್ಷಿಗಳ ವರ್ತನೆಗಳನ್ನು ಗಮನಿಸಿ ಅವರು ಹವಾಮಾನವನ್ನು ಅಂದಾಜಿಸುತ್ತಿದ್ದರು. ಹುಳು, ಹಕ್ಕಿ, ಇರುವೆ… ಎಲ್ಲವೂ ಸಂಕೇತವಾಗಿತ್ತು. ಅಂದ್ರೆ ಪ್ರಾಣಿಗಳ ಮತ್ತು ಕೀಟಗಳ ವರ್ತನೆಗೆ ಪೂರ್ವಜರು ವಿಶೇಷ ಮಹತ್ವ ನೀಡುತ್ತಿದ್ದರು.
ವೂಲಿ ಬೇರ್ ಕ್ಯಾಟರ್ಪಿಲ್ಲರ್ ದೇಹದ ಮೇಲಿನ ಕಪ್ಪು ಹಾಗೂ ಕಂದು ಬಣ್ಣದ ಪಟ್ಟಿಗಳನ್ನು ನೋಡಿ ಚಳಿಗಾಲದ ತೀವ್ರತೆಯನ್ನು ಅಂದಾಜಿಸುತ್ತಿದ್ದರು. ಇರುವೆಗಳು ಎತ್ತರದ ಗೂಡು ಕಟ್ಟಿದರೆ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ನಂಬಲಾಗುತ್ತಿತ್ತು. ಪಕ್ಷಿಗಳು ಕೆಳಮಟ್ಟದಲ್ಲಿ ಹಾರುವುದು, ವಲಸೆ ಪಕ್ಷಿಗಳು ಮುಂಚಿತವಾಗಿ ಸ್ಥಳಾಂತರಗೊಳ್ಳುವುದು ಕೂಡ ಹವಾಮಾನ ಬದಲಾವಣೆಯ ಸೂಚನೆಯೆಂದು ಪರಿಗಣಿಸಲಾಗುತ್ತಿತ್ತು. ಡ್ರ್ಯಾಗನ್ ಫ್ಲೈಗಳು ಮತ್ತು ಇತರ ಕೀಟಗಳ ಚಲನವಲನಗಳೂ ಮಳೆಯ ಮುನ್ಸೂಚನೆಗಳಾಗಿದ್ದವು.
ಅಲ್ಲದೆ ಸಸ್ಯಗಳ ಬೆಳವಣಿಗೆ, ಎಲೆ ಉದುರುವ ರೀತಿ, ಈರುಳ್ಳಿಯ ತೊಗಟೆಯ ದಪ್ಪ, ಜೇಡರ ಬಲೆಗಳ ವಿನ್ಯಾಸ, ಮೀನುಗಳ ಚಲನೆ ಸೇರಿದಂತೆ ಅನೇಕ ನೈಸರ್ಗಿಕ ಲಕ್ಷಣಗಳನ್ನು ಒಟ್ಟುಗೂಡಿಸಿ ಹವಾಮಾನವನ್ನು ವಿಶ್ಲೇಷಿಸುತ್ತಿದ್ದರು.



