ಕೋಲ್ಕತ್ತಾದ ನಿಲ್ರತನ್ ಸಿರ್ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಎನ್‌ಆರ್‌ಎಸ್) ಬುಧವಾರ ರಾತ್ರಿ ನರ್ಸ್ ಒಬ್ಬರ ಮೃತದೇಹ ಪತ್ತೆಯಾಗಿದೆ. ಆಸ್ಪತ್ರೆಯ ಶೌಚಾಲಯವೊಂದರಲ್ಲಿ ಮೃತದೇಹ ಪತ್ತೆಯಾಗಿದ್ದು, ಅದನ್ನು ಹೊರತೆಗೆಯಲು ಪೊಲೀಸರು ಬಾಗಿಲನ್ನು ಒಡೆಯಬೇಕಾಯಿತು. ಮೃತ ನರ್ಸ್ ಅವರನ್ನು 30 ವರ್ಷದ ರೂಪಾಲಿ ಬರ್ಮನ್ ಎಂದು ಗುರುತಿಸಲಾಗಿದೆ.
ಶೌಚಾಲಯದ ಬಾಗಿಲು ದೀರ್ಘಕಾಲದವರೆಗೆ ಮುಚ್ಚಲ್ಪಟ್ಟಿತ್ತು, ಪದೇ ಪದೇ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬಾಗಿಲನ್ನು ಬಲವಂತವಾಗಿ ತೆರೆದು ಮೃತದೇಹವನ್ನು ಹೊರತೆಗೆದರು ಮತ್ತು ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ನರ್ಸ್ ಸಾವಿನ ಕುರಿತು ಮಾತನಾಡಿದ ಜಂಟಿ ಪೊಲೀಸ್ ಆಯುಕ್ತ (ಅಪರಾಧ ವಿಭಾಗ) ಕುನಾಲ್ ಅಗರ್ವಾಲ್, “ಈ ವಿಷಯ ರಾತ್ರಿ 10:30ರ ಸುಮಾರಿಗೆ ಬೆಳಕಿಗೆ ಬಂದಿತು. ಆಸ್ಪತ್ರೆಯ ಸ್ತ್ರೀರೋಗ ವಿಭಾಗದಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಲಿದೆ. ಕೋಲ್ಕತ್ತಾ ಪೊಲೀಸರ ಡಿಡಿ ಕೊಲೆ ತನಿಖಾ ವಿಭಾಗವು ಈಗಾಗಲೇ ತನಿಖೆಯನ್ನು ಕೈಗೆತ್ತಿಕೊಂಡಿದೆ. ಇದು ಆತ್ಮಹತ್ಯೆ ಎಂದು ಇಲ್ಲಿಯವರೆಗೆ ದೃಢಪಟ್ಟಿಲ್ಲ. ವಿಧಿವಿಜ್ಞಾನ ತಂಡವು ಶೀಘ್ರದಲ್ಲೇ ಸ್ಥಳಕ್ಕೆ ಆಗಮಿಸಲಿದೆ. ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ,” ಎಂದು ತಿಳಿಸಿದರು.
ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ತಂಡವು ಶೀಘ್ರದಲ್ಲೇ ಆಸ್ಪತ್ರೆಗೆ ಆಗಮಿಸಲಿದೆ. ಪ್ರಾಥಮಿಕ ತನಿಖೆಯ ಪ್ರಕಾರ, 30 ವರ್ಷದ ನರ್ಸ್ ಬುಧವಾರ ರಾತ್ರಿ ಕರ್ತವ್ಯದಲ್ಲಿದ್ದರು. ಅವರ ಪಾಳಿ ರಾತ್ರಿ 8 ಗಂಟೆಗೆ ಪ್ರಾರಂಭವಾಯಿತು. ಸ್ತ್ರೀರೋಗ ವಿಭಾಗದ ‘ಹೈ ಡಿಪೆಂಡೆನ್ಸಿ ಯೂನಿಟ್’ ನರ್ಸಿಂಗ್ ಸ್ಟೇಷನ್‌ನಲ್ಲಿ ಕರ್ತವ್ಯಕ್ಕೆ ಹಾಜರಾದ ನಂತರ, ಅವರು ಒಬ್ಬ ರೋಗಿಯನ್ನು ನೋಡಿದ್ದು, ಬಳಿಕ ಅವರು ಹೆಚ್‌ಡಿಯುನ ಶೌಚಾಲಯಕ್ಕೆ ತೆರಳಿದರು. ಅಲ್ಲಿಯೇ ನಂತರ ಅವರ ಮೃತದೇಹ ಪತ್ತೆಯಾಗಿದೆ.
ಶೌಚಾಲಯದ ಹೊರಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಮೂಲಗಳ ಪ್ರಕಾರ, ಘಟನಾವಳಿಗಳು ಅದರಲ್ಲಿ ಸೆರೆಯಾಗಿದ್ದು, ಪೊಲೀಸರು ಆ ದೃಶ್ಯಾವಳಿಗಳನ್ನು ಈಗಾಗಲೇ ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ಆ ನರ್ಸ್ ರಾತ್ರಿ 10:20ಕ್ಕೆ ಶೌಚಾಲಯದೊಳಗೆ ಪ್ರವೇಶಿಸಿದರು. ತುಂಬ ಹೊತ್ತಿನ ನಂತರವೂ ಆಕೆ ಹಿಂತಿರುಗದಿದ್ದಾಗ, ಸಹೋದ್ಯೋಗಿಗಳು ರಾತ್ರಿ 10:27ಕ್ಕೆ ಅವರನ್ನು ಕೂಗಿ ಕರೆದರು. ಆದರೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದರಿಂದ ಸಹೋದ್ಯೋಗಿಗಳಲ್ಲಿ ಆತಂಕ ಉಂಟಾಯಿತು. ಅಂತಿಮವಾಗಿ, ಶೌಚಾಲಯದ ಬಾಗಿಲನ್ನು ಬಲವಂತವಾಗಿ ತೆರೆಯಲಾಯಿತು. ಒಳಗೆ ಪ್ರವೇಶಿಸಿದಾಗ, ಅವರು ನೆಲದ ಮೇಲೆ ಅಸ್ವಸ್ಥರಾಗಿ (ಪ್ರಜ್ಞಾಹೀನ ಸ್ಥಿತಿಯಲ್ಲಿ) ಬಿದ್ದಿರುವುದು ಕಂಡುಬಂದಿತು.
ತಕ್ಷಣವೇ ಅವರನ್ನು ಟ್ರಾಲಿ ಮೇಲೆ ಮಲಗಿಸಿ ಪರಿಶೀಲಿಸಲಾಯಿತು ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಆತುರದಿಂದ ಕರೆದೊಯ್ಯಲಾಯಿತು. ಆದರೆ, ವೈದ್ಯರು ಚಿಕಿತ್ಸೆ ನೀಡುವ ಮೊದಲೇ ಅವರು ಮೃತಪಟ್ಟಿದ್ದರು.


