ಶನಿವಾರ, 24 ಅಕ್ಟೋಬರ್ 2026

ರೀಲ್ಸ್ ನೋಡಬೇಡ ಎಂದಿದ್ದಕ್ಕೆ 20 ವರ್ಷದ ಯುವತಿ ಆತ್ಮಹತ್ಯೆ

ಧಾರವಾಡ: ಮೊಬೈಲ್‌ನಲ್ಲಿ ರೀಲ್ಸ್‌ ನೋಡುತ್ತಿದ್ದ ಮಗಳಿಗೆ ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು 20 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಮೃತ ಯುವತಿಯನ್ನು ಮೇಘಾ ಗೂಬ್ಬನ್ನವರ್ ಎಂದು ಗುರುತಿಸಲಾಗಿದೆ. ಧಾರವಾಡದ ಖಾಸಗಿ ಕಾಲೇಜಿನಲ್ಲಿ ಡಿಎಡ್‌ ವ್ಯಾಸಂಗ ಮಾಡುತ್ತಿದ್ದ ಮೇಘಾ, ಇತ್ತೀಚೆಗೆ ಪೋಷಕರು ಕೊಡಿಸಿದ್ದ ಹೊಸ ಮೊಬೈಲ್‌ನಲ್ಲಿ ಹೆಚ್ಚಿನ ಸಮಯ ರೀಲ್ಸ್‌ ವೀಕ್ಷಿಸುತ್ತಿದ್ದರು ಎನ್ನಲಾಗಿದೆ.
ಮಗಳು ದಿನವಿಡೀ ಮೊಬೈಲ್‌ನಲ್ಲಿ ಕಾಲ ಕಳೆಯುತ್ತಿರುವುದರಿಂದ ಬೇಸತ್ತ ಪೋಷಕರು ರೀಲ್ಸ್‌ ನೋಡದಂತೆ ಬುದ್ಧಿವಾದ ಹೇಳಿದ್ದರು. ಇದರಿಂದ ಮನನೊಂದ ಮೇಘಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಘಟನೆ ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಗರಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.