ಮದುವೆಗೆ ಒಂದು ದಿನ ಬಾಕಿ ಇರುವಾಗ ಹುಡುಗಿಯ ಮಾಜಿ ಲವ್ವರ್ ಹುಡುಗನ ಮನೆಗೆ ಮೆಸೇಜ್ ಕಳುಹಿಸಿದ್ದಾನೆ. ಇದರಿಂದ ಮನನೊಂದು ಮದುವೆಯಾಗಬೇಕಿದ್ದ ಹುಡುಗಿ ಹಾಗೂ ಆಕೆಯ ಅಪ್ಪ ಅಮ್ಮ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಅಘಾತಕಾರಿ ಘಟನೆ ಎಂದು ಮೈಸೂರು ಜಿಲ್ಲೆಯ ಟಿ ನರಸೀಪುರದಲ್ಲಿ ನಡೆದಿದೆ.
ತಂದೆ ಶಿವಣ್ಣ (54), ತಾಯಿ ನಾಗರತ್ನ (44) ಹಾಗೂ ಮಗಳು ರಕ್ಷಿತಾ (21) ಆತ್ಮಹತ್ಯೆಗೆ ಶರಣಾದವರು. ಮೂವರ ಸಾವಿಗೂ ಉಲ್ಲಾಸ್ ಗೌಡ ಕಾರಣನೆಂದು ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ಉಲ್ಲಾಸ್ ಗೌಡನ ಕಿರುಕುಳ ಹಾಗೂ ಮಾನಸಿಕ ಹಿಂಸೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ರಕ್ಷಿತಾಗೆ ಮೂರು ತಿಂಗಳ ಹಿಂದಷ್ಟೇ ಬೇರೊಬ್ಬ ಯುವಕನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಆಕೆಯ ನಿಶ್ಚಿತಾರ್ಥದ ಸಂದರ್ಭದಲ್ಲೂ ಆರೋಪಿ ಉಲ್ಲಾಸ್ ಗೌಡ ಅಲ್ಲೇ ಓಡಾಡಿಕೊಂಡಿದ್ದನು. ಇದೇ ತಿಂಗಳ 23 ಮತ್ತು 24ರಂದು ಮದುವೆ ದಿನಾಂಕವೂ ನಿಗದಿಯಾಗಿತ್ತು. ಆದರೆ, ಕೇವಲ ಒಂದು ವಾರದ ಹಿಂದೆ ರಕ್ಷಿತಾಳ ಪೋಷಕರ ಬಳಿ ಬಂದ ಉಲ್ಲಾಸ್, ತಾನು ಆಕೆಯನ್ನು ಪ್ರೀತಿಸುತ್ತಿರುವುದಾಗಿ ಹೇಳಿ, ತನಗೆ ಮದುವೆ ಮಾಡಿಕೊಡುವಂತೆ ಪೀಡಿಸಿದ್ದಾನೆ. ಪೋಷಕರು ಆತನಿಗೆ ಬೈದು ಬುದ್ಧಿವಾದ ಹೇಳಿದರೂ ಕೇಳದೆ ರಂಪಾಟ ಮಾಡಿದ್ದನು. ಈ ಹಿನ್ನೆಲೆಯಲ್ಲಿ ಆ ದಿನವೇ ರಾತ್ರಿ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯತಿ ಕೂಡ ನಡೆಸಲಾಗಿತ್ತು ಎನ್ನಲಾಗಿದೆ.
ಅದಾದ ಬಳಿಕ ಈ ಹಿಂದೆ ರಕ್ಷಿತಾ ತನಗೆ ಕಳುಹಿಸಿದ್ದ ಕೆಲವು ಮೆಸೇಜ್ ಹಾಗೂ ಫೋಟೋಗಳನ್ನು ಇಟ್ಟುಕೊಂಡು ಆಕೆಗೆ ನಿರಂತರವಾಗಿ ಮಾನಸಿಕ ಹಿಂಸೆ ಹಾಗೂ ಕಿರುಕುಳ ನೀಡುತ್ತಿದ್ದ. ಅಷ್ಟಕ್ಕೇ ನಿಲ್ಲಿಸದೇ ರಕ್ಷಿತಾಳ ಮದುವೆ ನಿಶ್ಚಯವಾಗಿದ್ದ ಯುವಕನಿಗೂ ಆ ಮೆಸೇಜ್ ಹಾಗೂ ಫೋಟೋಗಳನ್ನು ಕಳುಹಿಸಿದ್ದ. ಇದರಿಂದ ಅವಮಾನಕ್ಕೊಳಗಾದ ಕುಟುಂಬಸ್ಥರು ಡೆತ್‌ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ವರುಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.


