ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಧಾರ್ಮಿಕ ಮುಖಂಡರು ಹಾಗೂ ಜಿಲ್ಲಾ ಖಾಝಿ ಆಗಿದ್ದ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ (Twaka Ahmed Musliyar) ಅವರು ನಿಧನರಾಗಿದ್ದಾರೆ. ಕೆಲವು ಸಮಯದಿಂದ ಅನಾರೋಗಕ್ಕೀಡಾಗಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರಿಂದು ಕೊನೆಯುಸಿರೆಳೆದಿದ್ದಾರೆ. ಅವರ ಅಗಲಿಕೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
Sponsoredಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರು ತ್ವಾಕಾ ಉಸ್ತಾದ್ ಎಂದೇ ಜನಪ್ರಿಯರಾಗಿದ್ದರು. ಅವರು ಕೇವಲ ದಕ್ಷಿಣ ಕನ್ನಡ ಜಿಲ್ಲೆಯಷ್ಟೇ ಅಲ್ಲದೆ ಕೇರಳದ ಧಾರ್ಮಿಕ ವಲಯದಲ್ಲೂ ದೊಡ್ಡ ಹೆಸರಾಗಿದ್ದರು. ಕಳೆದ 2010ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಖಾಝಿಯಾಗಿ ಅಧಿಕಾರ ಸ್ವೀಕರಿಸಿದ್ದ ಅವರು, ಅಲ್ಲಿಂದೀಚೆಗೆ ಸತತವಾಗಿ ಸಮಾಜದ ಶಾಂತಿ ಮತ್ತು ಸೌಹಾರ್ದತೆಗೆ ಶ್ರಮಿಸಿದ್ದರು. ದಕ್ಷಿಣ ಕನ್ನಡ ಮತ್ತು ಕೇರಳದ ಸುಮಾರು 200ಕ್ಕೂ ಹೆಚ್ಚು ಜಮಾಹತ್‌ಗಳ ಖಾಝಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದರು. ಇದರೊಂದಿಗೆ ಇಡೀ ಕಾಸರಗೋಡು ಜಿಲ್ಲೆಯ ಅಧ್ಯಕ್ಷರಾಗಿಯೂ ಅವರು ಧಾರ್ಮಿಕ ನೇತೃತ್ವ ವಹಿಸಿದ್ದರು. ಸೌಮ್ಯ ಸ್ವಭಾವ ಹಾಗೂ ಸಮಾಜದ ಎಲ್ಲಾ ವರ್ಗದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಮುಸ್ಲಿಯಾರ್ ಅವರ ನಿಧನಕ್ಕೆ ಕರಾವಳಿ ಭಾಗದಲ್ಲಿ ತೀವ್ರ ಶೋಕ ವ್ಯಕ್ತವಾಗಿದೆ.
ಟ್ವಿಟ್ಟರ್ ಮೂಲಕ ತಮ್ಮ ಕಂಬನಿ ಮಿಡಿದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, “ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಗಿದೆ” ಎಂದು ಬರೆದುಕೊಂಡಿದ್ದಾರೆ. ಅವರ ಧಾರ್ಮಿಕ ಬೋಧನೆಗಳು, ಅವರು ಸಮಾಜಕ್ಕೆ ತೋರಿಸಿದ ಸನ್ಮಾರ್ಗದ ಹಾದಿ ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆಗಳು ಎಂದೆಂದಿಗೂ ನೆನಪಿನಲ್ಲಿ ಉಳಿಯಲಿವೆ ಎಂದು ಸಿಎಂ ಸ್ಮರಿಸಿದ್ದಾರೆ.




