ಉಪ್ಪಿನಂಗಡಿ: ಶಾಲಾ ಮೈದಾನದಲ್ಲಿ ಆಟವಾಡಿ ಮನೆಗೆ ಮರಳುತ್ತಿದ್ದ ಇಬ್ಬರು ಬಾಲಕರನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ಯಲು ಯತ್ನ ಮಾಡಿದ ಘಟನೆಗೆ ಕುರಿತಂತೆ, ಉಪ್ಪಿನಂಗಡಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ನಾಲ್ವರು ಶಂಕಿಸಿ ಯುವಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
Sponsoredಶನಿವಾರ ಶಾಲಾ ರಜೆಯಿದ್ದ ಕಾರಣ ಹಿರೇಬಂಡಾಡಿ ಗ್ರಾಮದ ಅಡ್ಕಲ್ ಎಂಬಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ಮೈದಾನದಲ್ಲಿ ಆಟವಾಡಿ ಮನೆಗೆ ಹೋಗುತ್ತಿದ್ದು, ಈ ವೇಳೆ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿದ್ದ ನಾಲ್ಕೈದು ಮಂದಿಯ ತಂಡವೊಂದು, ನಾವು ಆ ಕಡೆಗೇ ಹೋಗುತ್ತಿದ್ದೇವೆ, ಬನ್ನಿ ಡ್ರಾಪ್ ಮಾಡುತ್ತೇವೆ ಎಂದು ಬಾಲಕರನ್ನು ಕರೆದಿದ್ದು, ನಿರಾಕರಿಸಿದ ಬಾಲಕರನ್ನು ಇಬ್ಬರು ಬೆನ್ನಟ್ಟಿದ್ದಾರೆ ಎನ್ನಲಾಗಿದೆ. ಇದರಿಂದ ಭಯಭೀತಗೊಂಡ ಬಾಲಕರು ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾರೆ.
ಈ ಕಾರು ಬಹಳ ಹೊತ್ತಿನಿಂದ ಅದೇ ಪ್ರದೇಶದಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಾ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಘಟನೆಯ ಕುರಿತು ಗಂಭೀರವಾಗಿ ಪರಿಗಣಿಸಿದ ಉಪ್ಪಿನಂಗಡಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಾರನ್ನು ಪತ್ತೆ ಹಚ್ಚಿದ್ದು, ಕಾರಿನಲ್ಲಿದ್ದ ನಾಲ್ವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಯುವಕರು ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಗೆಳೆಯನ ಕಾರಿನಲ್ಲಿ ಇಂಧನ ಖಾಲಿಯಾಗಿದ್ದು, ಅಡ್ಕಲ್ ಬಳಿ ನಿಲ್ಲಿಸಲಾಗಿತ್ತು. ಇಂಧನ ತರಿಸಿ ಕಾರು ಸ್ಟಾರ್ಟ್ ಮಾಡುವಾಗ ದಾರಿಯಲ್ಲಿ ಹೋಗುತ್ತಿದ್ದ ಬಾಲಕರಿಗೆ ಸಹಾಯ ಮಾಡುವ ಉದ್ದೇಶದಿಂದ ಲಿಫ್ಟ್ ಕೊಡಲು ಮುಂದಾಗಿದ್ದು, ನಮಗೆ ಯಾವುದೇ ದುರುದ್ದೇಶವಿರಲಿಲ್ಲ ಎಂದು ಯುವಕರು ತಿಳಿಸಿದ್ದಾರೆ.
ಆದರೆ ಬಾಲಕರು ನೀಡಿದ ದೂರು ಮತ್ತು ಯುವಕರ ಹೇಳಿಕೆಗಳಲ್ಲಿ ವ್ಯತ್ಯಾಸವಿರುವುದರಿಂದ ಪೊಲೀಸರು ಈ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯಲು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.



