ಸೋಮವಾರ, 26 ಅಕ್ಟೋಬರ್ 2026
Trending

ಮಂಗಳೂರು: 12 ವರ್ಷಗಳ ಹಿಂದಿನ ಕೊಲೆ ಪ್ರಕರಣ: ಪಣಂಬೂರಿನ ಮೂವರು ಸೋದರರು ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ

ಮಂಗಳೂರು: 12 ವರ್ಷಗಳ ಹಿಂದೆ ಪಣಂಬೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಮೀನಕಳಿಯ ಗಣೇಶ್‌ ಶಿಪ್ಪಿಂಗ್‌ ಗೋಡೌನ್‌ ಬಳಿ ಮೀನಕಳಿಯ ನಿವಾಸಿ ಗಂಗಾಧರ ಪಾಂಗಾಳ ಎಂಬುವವರನ್ನು ಪೂರ್ವ ದ್ವೇಷದಿಂದ ಕೊಲೆಗೈದ ಮೂವರು ಸಹೋದರರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

Sponsored

ಆರೋಪಿಗಳಾದ ಸತೀಶ್‌ ಬೈಕಂಪಾಡಿ, ಪುಷ್ಪರಾಜ್‌, ಹರೀಶ್‌ ಬೈಕಂಪಾಡಿ, ಭಾಸ್ಕರ್‌ ಬೈಕಂಪಾಡಿ ಎಂಬುವವರು ಜೀವಾವಧಿ ಶಿಕ್ಷೆಗೆ ಗುರಿಯಾದವರು.

ಒಂದನೇ ಆರೋಪಿ ಸತೀಶ್‌ ಬೈಕಂಪಾಡಿ ಅವರು ಬೈಕಂಪಾಡಿ ಮೊಗವೀರ ಮಹಾಸಭಾದ ಸದಸ್ಯತ್ವದಿಂದ ಅಮಾನತು ಮಾಡಲು ಗಂಗಾಧರ ಪಾಂಗಾಳ ಅವರೇ ಕಾರಣ ಎಂದು ಭಾವಿಸಿ ದ್ವೇಷ ಸಾಧಿಸಿದ ಆರೋಪಿಗಳು ಪೂರ್ವ ನಿಯೋಜಿತ ಒಳಸಂಚು ರೂಪಿಸಿ ಬೊಲೇರೋ ವಾಹನದ ಮೂಲಕ ಸ್ಕೂಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದು ಗಂಗಾಧರ ಪಾಂಗಾಳ ಅವರ ತಲೆ ಮತ್ತು ಮೈ ಕೈಗೆ ಪೆಟ್ಟಾಗಿ ಮೃತಪಟ್ಟದ್ದನ್ನು ದೃಢಪಡಿಸಿದ ನಂತರ ಆರೋಪಿಗಳು ತಾವು ಬಂದ ವಾಹನದ ಮೂಲಕ ಸ್ಥಳದಿಂದ ಪರಾರಿಯಾಗಿದ್ದರು. ಈ ಕುರಿತು ತನಿಖೆ ಕೈಗೊಂಡ ಮಂಗಳೂರಿನ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಕೆಯಾಗಿತ್ತು.

ಜುಲೈ 27 ರಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಒಂದರಿಂದ ನಾಲ್ಕನೆಯ ಆರೋಪಿತರ ವಿರುದ್ಧ ಆರೋಪ ಸಾಬೀತಾದ ಕಾರಣ ಶಿಕ್ಷೆ ವಿಧಿಸಿ ತೀರ್ಪನ್ನು ಪ್ರಕಟ ಮಾಡಿರುತ್ತಾರೆ. ಸತೀಶ್‌ ಬೈಕಂಪಾಡಿ, ಹರೀಶ್‌ ಬೈಕಂಪಾಡಿ, ಭಾಸ್ಕರ್‌ ಬೈಕಂಪಾಡಿ ಇವರು ಪಣಂಬೂರು ಠಾಣಾ ವ್ಯಾಪ್ತಿಯ ಮೀನಕಳಿಯ ನಿವಾಸಿಗಳಾಗಿದ್ದು, ಇನೊಬ್ಬ ಆರೋಪಿ ಪುಷ್ಪರಾಜ್‌ ಉಡುಪಿ ಜಿಲ್ಲೆಯ ಶಿವಳ್ಳಿ ಗ್ರಾಮದ ನಿವಾಸಿ. ಎಲ್ಲಾ ನಾಲ್ಕು ಆರೋಪಿಗಳಿಗೆ ನ್ಯಾಯಾಲಯವು ಶಿಕ್ಷೆ ಪ್ರಕಟ ಮಾಡಿ ಆದೇಶಿಸಿದೆ.

ಆರೋಪಿ ಎ-1 ಸತೀಶ್‌ ಬೈಕಂಪಾಡಿ (57), ಎ-3 ಆರೋಪಿ ಹರೀಶ್‌ ಬೈಕಂಪಾಡಿ (61), ಎ-4 ಆರೋಪಿ ಭಾಸ್ಕರ್‌ ಬೈಕಂಪಾಡಿ (63) ಅವರಿಗೆ ಜೀವಾವಧಿ ಶಿಕ್ಷೆ ಮತ್ತು ರೂ.15 ಸಾವಿರ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದ್ದಲ್ಲಿ ಒಂದು ವರ್ಷ ಹೆಚ್ಚುವರಿ ಸಾದಾ ಶಿಕ್ಷೆ ಮತ್ತು ಪ್ರಕರಣದಲ್ಲಿ ಎ2 ಆರೋಪಿ ಪುಷ್ಪರಾಜ (47) ಎಂಬಾತನಿಗೆ ಜೀವಾವಧಿ ಶಿಕ್ಷೆ ಮತ್ತು ರೂ.15000 ದಂಡ ಪಾವತಿಸಲು ತಪ್ಪಿದ್ದಲ್ಲಿ ಒಂದು ವರ್ಷ ಹೆಚ್ಚುವರಿ ಸಾದಾಶಿಕ್ಷೆ ಹಾಗೂ ಎಲ್ಲಾ ಆರೋಪಿತರಿಗೆ ಎರಡು ವರ್ಷ ಸಾದಾ ಶಿಕ್ಷೆ ಮತ್ತು ರೂ.1000 ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ ಒಂದು ತಿಂಗಳ ಹೆಚ್ಚುವರಿ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ಪ್ರಕಟ ಮಾಡಲಾಗಿದೆ.

60000 ರೂ. ದಂಡದ ಪೈಕಿ ರೂ. 50000 ನ್ನು ಪರಿಹಾರವಾಗಿ ಮೃತನ ಮಗಳಿಗೆ ಮತ್ತು 16000 ರೂ. ವನ್ನು ಸರಕಾರಕ್ಕೆ ಪಾವತಿಸಲು ಆದೇಶಿಸಲಾಗಿದೆ. ಕೃತ್ಯಕ್ಕೆ ಬಳಸಿದ ಆರೋಪಿತರಿಗೆ ಸೇರಿದ ಬೊಲೆರೋ, ರಿಡ್ಝ್‌ ಹಾಗೂ ಮಾರುತಿ ಕಾರನ್ನು ವಶಕ್ಕೆ ಪಡೆದು ಸರಕಾರಕ್ಕೆ ಮುಟ್ಟುಗೋಲು ಹಾಕಲು ಆದೇಶಿಸಲಾಗಿದೆ.