ಶನಿವಾರ, 24 ಅಕ್ಟೋಬರ್ 2026

ಮಂಗಳೂರು ಚಿನ್ನದ ಉದ್ಯಮಿ ದರೋಡೆ ಪ್ರಕರಣದಲ್ಲಿ ಬಿಗ್‌ ಟ್ವಿಸ್ಟ್‌

ಮಂಗಳೂರು, ಜು.2: ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇರಳದ ಚಿನ್ನದ ವ್ಯಾಪಾರಿ ವಿಕಾಸ್‌ ಮತ್ತು ಅವರ ಕುಟುಂಬವನ್ನು ಅಡ್ಡಗಟ್ಟಿ ದರೋಡೆ ಮಾಡಲಾದ ಕೃತ್ಯಕ್ಕೆ ಸಂಬಂಧಪಟ್ಟಂತೆ ಇದೊಂದು ಪಕ್ಕಾ ಪ್ಲಾನ್ಡ್‌ ಅಪರೇಷನ್‌ ಎನ್ನುವ ಶಂಕೆ ವ್ಯಕ್ತವಾಗಿರುವ ಕುರಿತು ವರದಿಯಾಗಿದೆ. ಈ ಕುರಿತು ತನಿಖೆ ತೀವ್ರಗೊಳಿಸಿದ ಪೊಲೀಸರಿಗೆ ಇದೊಂದು ಬಂಟ್ವಾಳದಲ್ಲಿ ದರೋಡೆಕೋರರು ಅಪಹರಣ ಮಾಡಿದ ಸ್ವಿಫ್ಟ್‌ ಕಾರು ಪತ್ತೆಯಾಗಿದ್ದು, ಹಲವು ಸುಳಿವುಗಳು ದೊರಕಿದೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಕಲ್ಪನೆ ಎನ್ನುವ ಸ್ಥಳದಲ್ಲಿ ದರೋಡೆಕೋರರು ಸ್ವಿಫ್ಟ್‌ ಡಿಸೈರ್‌ ಕಾರನ್ನು ಬಿಟ್ಟು ಎಸ್ಕೇಪ್‌ ಆಗಿದ್ದಾರೆ. ಕಾರಿನ ಸೀಟುಗಳು, ಡಿಕ್ಕಿಯ ಕವರ್‌ಗಳನ್ನು ಹರಿದು ಹಾಕಿ, ಮೂಲೆ ಮೂಲೆಯನ್ನು ಜಾಲಾಡಿಸಲಾಗಿದೆ. ಕೋಟ್ಯಂತರ ಮೌಲ್ಯದ ಗೋಲ್ಡ್‌ ಬಿಸ್ಕರ್‌ ಅಡಗಿಸಲಾಗಿದೆ ಎನ್ನುವ ಪಕ್ಕಾ ಮಾಹಿತಿಯ ಮೇರೆಗೆ ದರೋಡೆಕೋರರು ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.

ಇನ್ನೊಂದು ವಿಷಯವೇನೆಂದರೆ, ದರೋಡೆಕೋರರು, ವ್ಯಾಪಾರಿ ವಿಕಾಸ್‌, ಅವರ ಪತ್ನಿ ಮತ್ತು ಮಗ ಧರಿಸಿದ್ದ ಮೈ ಮೇಲಿನ ಚಿನ್ನಾಭರಣಗಳನ್ನು ಮುಟ್ಟುವ ಗೋಜಿಗೆ ಹೋಗಿಲ್ಲ. ಕೇವಲ ಕಾರನ್ನೇ ಟಾರ್ಗೆಟ್‌ ಮಾಡಿದ್ದಾರೆ. ಮುಂಜಾನೆ 4 ಗಂಟೆಗೆ ಬೈಕಂಪಾಡಿ ಬಳಿ ವಿಕಾಸ್‌ ಅವರನ್ನು ಕಾರಿನಿಂದ ಹೊರಗೆ ಎಳೆದು ಹಾಕಿ, ಕಾರಿನೊಳಗೆ ಚಿನ್ನದ ಬಿಸ್ಕತ್‌ಗಳಿಗೆ ಹುಡುಕಾಟ ಮಾಡಿದ್ದಾರೆ. ಅಲ್ಲಿಂದ ಎರಡು ಕಿ.ಮೀ. ದೂರದ ತನ ಕಾರನ್ನು ಚಲಾಯಿಸಿಕೊಂಡು ಹೋಗಿ ಪತ್ನಿ ಮತ್ತು ಮಗನನ್ನು ಕಾರಿನಿಂದ ಇಳಿಸಿ ಕಾರು ಸಮೇತ ಪರಾರಿಯಾಗಿದ್ದಾರೆ.

ವಿಕಾಸ್‌ ಅವರು ಮಹಾರಾಷ್ಟ್ರದಲ್ಲಿ ಮದುವೆ ಮುಗಿಸಿ ಕೇರಳಕ್ಕೆ ಮರಳುತ್ತಿದ್ದು, ಕೇವಲ 20 ಲಕ್ಷ ಮೌಲ್ಯದ ಚಿನ್ನಾಭರಣವಿತ್ತೇ? ಅಥವಾ ಕಾರಿನ ರಹಸ್ಯ ಜಾಗದಲ್ಲಿ ಬೇರೆ ದೊಡ್ಡ ಮಟ್ಟದ ಚಿನ್ನ ಸಾಗಾಟ ಮಾಡುತ್ತಿದ್ದರೇ ಎನ್ನುವ ನಿಟ್ಟಿನಲ್ಲಿ ಕೂಡಾ ಪಣಂಬೂರು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.