ಮಂಗಳೂರು: ಉಡುಪಿ ಇಂದ್ರಾಳಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪುತ್ರ ನವನೀತ್ ಶೆಟ್ಟಿ ಮತ್ತು ಜ್ಯೋತಿಷಿ ನಿರಂಜನ್ ಭಟ್ ಮೇಲೆ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಸಹ ಕೈದಿಗಳು ಹಲ್ಲೆ ಮಾಡಿದ್ದು, ಕೊಲೆಯತ್ನ ನಡೆಸಿದ ಪ್ರಕರಣದಲ್ಲಿ 14 ಮಂದಿ ದೋಷಿಗಳೆಂದು ಮಂಗಳೂರು ನ್ಯಾಯಾಲಯದಲ್ಲಿ ಸಾಬೀತಾಗಿದೆ.
2017 ಸೆ.11 ರಂದು ಮಧ್ಯಾಹ್ನ ಜೈಲಿನ ವರಾಂಡದಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದ ನವನೀತ್ ಶೆಟ್ಟಿ ಮತ್ತು ನಿರಂಜನ ಭಟ್ ಮೇಲೆ ಸಹ ಕೈದಿಗಳು ಹಲ್ಲೆ ನಡೆಸಿದ್ದರು. ಹೋಮ್ ಗಾರ್ಡ್ ಆಗಿದ್ದ ರೇವತಿ ಅವರಿಗೂ ಈ ಘಟನೆಯಲ್ಲಿ ಹಲ್ಲೆಯಾಗಿತ್ತು.
ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆ ನಡೆದು ಇದೀಗ 14 ಮಂದಿ ದೋಷಿಗಳೆಂದು ಸಾಬೀತಾಗಿದ್ದು, ಸೆ.16 ರಂದು ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ. ಈ ಪೈಕಿ ಮೂವರು ಇತರ ಪ್ರಕರಣಗಳಲ್ಲಿ ಆರೋಪಿಗಳಾಗಿ ಜೈಲಿನಲ್ಲಿದ್ದು, 10 ಮಂದಿಯನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಓರ್ವ ನ್ಯಾಯಾಲಯಕ್ಕೆ ಗೈರಾಗಿದ್ದಾನೆ.