Home » ಮಂಗಳೂರು: ಸಂಚಾರ ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಮೀಡಿಯಾದವನು ಎಂದು ಹೇಳಿ ವ್ಯಕ್ತಿಯಿಂದ ದಾಂಧಲೆ

ಮಂಗಳೂರು: ಸಂಚಾರ ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಮೀಡಿಯಾದವನು ಎಂದು ಹೇಳಿ ವ್ಯಕ್ತಿಯಿಂದ ದಾಂಧಲೆ

0 comments

ಮಂಗಳೂರು, ಸೆ.11: ನಗರದ ಬಂಟ್ಸ್‌ ಹಾಸ್ಟೆಲ್‌ ಜಂಕ್ಷನ್‌ನಲ್ಲಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಪೊಲೀಸ್‌ ಸಿಬ್ಬಂದಿಗೆ ಅಡ್ಡಿಪಡಿಸಿ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿದ ಅಪರಿಚಿತ ವ್ಯಕ್ತಿಯ ವಿರುದ್ಧ ಮಂಗಳೂರು ಸಂಚಾರ ಪೂರ್ವ (ಕದ್ರಿ) ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆ.9 ರಂದು ಬೆಳಗ್ಗೆ ಸುಮಾರು 10.50ಕ್ಕೆ ಬಂಟ್ಸ್‌ ಹಾಸ್ಟೆಲ್‌ ಜಂಕ್ಷನ್‌ನಲ್ಲಿ ಸಂಚಾರ ಪೂರ್ವ ಠಾಣೆಯ ಸಿಪಿಸಿ ಅಭಿಷೇಕ್‌ ಬಿ.ಜಿ. ಹಾಗೂ ಸಿಎಚ್‌ಸಿ ಶಂಕರಪ್ಪ ಕರ್ತವ್ಯದಲ್ಲಿದ್ದು, ಈ ವೇಳೆ ಪಿವಿಎಸ್‌ ಕಡೆಯಿಂದ ಬಂದ KA 19 EP 2541 ನೋಂದಣಿ ಸಂಖ್ಯೆಯ ಆಕ್ಟಿವಾ ದ್ವಿಚಕ್ರ ವಾಹನದ ನಂಬರ್‌ ಪ್ಲೇಟ್‌ನ ಕೊನೆಯ ಸಂಖ್ಯೆಗೆ ಸ್ಟಿಕ್ಕರ್‌ ಅಂಟಿಸಿರುವುದು ಪೊಲೀಸರ ಗಮನಕ್ಕೆ ಬಂದಿದ್ದು, ವಾಹನ ತಡೆದು, ನಂಬರ್‌ ಪ್ಲೇಟ್‌ನ ಫೋಟೋ ತೆಗೆಯಲು ಪೊಲೀಸರು ಮುಂದಾದಾಗ ಪೋಟೋ ಯಾಕೆ ತೆಗೆಯುತ್ತೀರಿ ಎಂದು ಸವಾರ ಜೋರು ಧ್ವನಿಯಲ್ಲಿ ಪ್ರಶ್ನೆ ಮಾಡಿದ್ದಾನೆ.

ಯಾಕೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದೀರಿ? ನಾನು ಮೀಡಿಯಾದವನು, ನಿಮ್ಮ ವಿಡಿಯೋ ಮಾಡಿ ವೈರಲ್‌ ಮಾಡುತ್ತೇನೆ ಎಂದು ಹೇಳಿದ್ದಾನೆ ಎಂದು ವರದಿಯಾಗಿದೆ. ನಿನ್ನ ಕ್ಯಾಪ್‌ ಎಲ್ಲಿ? ನಮ್ಮ ಟ್ಯಾಕ್ಸ್‌ ಹಣದಿಂದ ನೀವು ಬದುಕುವುದು ಎಂದು ಏರುಧ್ವನಿಯಲ್ಲಿ ಮಾತನಾಡುತ್ತಾ 15 ನಿಮಿಷಗಳ ಕಾಲ ಪೊಲೀಸರ ಸಂಚಾರ ನಿಯಂತ್ರಣ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸ್ಥಳಕ್ಕೆ ಎಎಸ್‌ಐ ಜಗದೀಶ್‌ ಹಾಗೂ ಸಿಪಿಸಿ ಪ್ರವೀಣ್‌ ಆಗಮಿಸುತ್ತಿದ್ದಂತೆ ಅಪರಿಚಿತ ವ್ಯಕ್ತಿ ಅಲ್ಲಿಂದ ತೆರಳಿದ್ದಾನೆ.

ಆರೋಪಿ ಅನಂತರ ತಾನು ಚಿತ್ರೀಕರಣ ಮಾಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಪೊಲೀಸ್‌ ಇಲಾಖೆ ಹಾಗೂ ಕರ್ತವ್ಯನಿರತ ಸಿಬ್ಬಂದಿಯ ವಿರುದ್ಧ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡಿಸುವ ರೀತಿಯಲ್ಲಿ ಅಪಪ್ರಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಕದ್ರಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಅಪರಿಚಿತ ವ್ಯಕ್ತಿಯ ಗುರುತು ಪತ್ತೆಹಚ್ಚಿ ಬಂಧಿಸುವ ನಿಟ್ಟಿನಲ್ಲಿ ಪೊಲೀಸರ ತನಿಖೆ ನಡೆದಿದೆ.

You may also like