ಶನಿವಾರ, 24 ಅಕ್ಟೋಬರ್ 2026

ಅಯೋಧ್ಯಾ ರಾಮಮಂದಿರ ಸ್ಫೋಟಕ್ಕೆ ಸಂಚು; ಶಂಕಿತ ಉಗ್ರನ ಬಗ್ಗೆ ಪೊಲೀಸರಿಂದ ಸ್ಫೋಟಕ ಮಾಹಿತಿ

ದಾವಣಗೆರೆ, ಜೂ.25: ಹರಿಹರದ ಬನ್ನಿಕೋಡಿಯಲ್ಲಿ ಮಂಗಳವಾರ ಬಂಧಿಸಲಾದ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರ ಸೋಹೆಲ್‌ (20) ವಿಚಾರಣೆ ಸಂದರ್ಭದಲ್ಲಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತಹ ಸ್ಫೋಟಕ ಮಾಹಿತಿ ಬಯಲಾಗಿದೆ. ʼಕೋಟ್ಯಂತರ ಹಿಂದೂಗಳ ಆರಾಧ್ಯ ದೈವದ ನೆಲೆಯಾದ ಅಯೋಧ್ಯೆಯ ರಾಮಮಂದಿರವನ್ನು ಬಾಂಬ್‌ ಇಟ್ಟು ಸ್ಫೋಟಿಸಲು ನಾನು ಬಯಸಿದ್ದೆʼ ಎಂದು ತನಿಖಾಧಿಕಾರಿಗಳು ಮುಂದೆ ಈತ ಹೇಳಿದ್ದಾನೆ.

ಉತ್ತರಪ್ರದೇಶದ ಸಹರಾನ್‌ಪುರ ಜಿಲ್ಲೆಯ ಲಖ್ನೋತಿ ಗ್ರಾಮದವನಾದ ಈತನ ಮೊಬೈಲ್‌ ಜಾಡು ಹಿಡಿದ ಹೋದ ತನಿಖಾಧಿಕಾರಿಗಳಿಗೆ ಮೆಸೇಜ್‌ಗಳು, ಶಸ್ತ್ರಾಸ್ತ್ರ ಹಿಡಿದಿರುವ ಫೋಟೋಗಳು, ಉಗ್ರರನ್ನು ಹೋಲುವ ಚಿತ್ರಗಳು, ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ, ಭಯೋತ್ಪಾದನಾ ಕೃತ್ಯ ನಡೆಸಲು ಸಂಚು ರೂಪಿಸಿರುವ ವಿಚಾರ ಹೊಂದಿದ್ದ ಕುರಿತು ಮೊಬೈಲ್‌ ಸುಳಿವು ನೀಡಿದೆ.

ಈತ ಪಾಕಿಸ್ತಾನ ಮೂಲದ ರಾಣಾ ಎನ್ನುವ ವ್ಯಕ್ತಿ ಜೊತೆ ಉರ್ದುಮಿಶ್ರಿತ ಉತ್ತರ ಪ್ರದೇಶ ಶೈಲಿನ ಹಿಂದಿಯಲ್ಲಿ ಮಾತನಾಡಿದ್ದು, ನಾನು ಅಯೋಧ್ಯೆಯ ರಾಮಮಂದಿರವನ್ನು ಬಾಂಬ್‌ ಇಟ್ಟು ಸ್ಫೋಟಿಸಲು ಬಯಸಿದ್ದು, ಇದಕ್ಕೆ ಸ್ಕೆಚ್‌ ಹಾಕುತ್ತಿದ್ದೇನೆ ಎಂದು ತಿಳಿಸಿದ್ದ. ರಾಣಾಜೀ ಎನ್ನುವ ಹೆಸರಿನಲ್ಲಿ ಆತನ ಹೆಸರನ್ನು ಸೇವ್‌ ಮಾಡಿಕೊಂಡಿದ್ದ.

ಪಾಕ್‌ ಮೂಲದ ಹಲವು ಉಗ್ರ ಸಂಘಟನೆಗಳ ವಾಟ್ಸಪ್‌ ಗ್ರೂಪ್‌ಗಳಲ್ಲಿ ಈತ ಸಕ್ರಿಯನಾಗಿದ್ದ. ಮೆಮೊನ್‌ ಆಂಡ್‌ ಜುಟ್ಟೂ 333, ರಾಣಾ ಬಾಯಿ ಗ್ರೂಪ್‌ 333…., ವಿಐಪಿ ಪಬ್ಲಿಕ್‌ ಚಾನಲ್‌ಗಳಿಗೆ ಸಬ್‌ಸ್ಕೈಬ್‌ ಆಗಿದ್ದಾನೆ. ಈತನ ಮೊಬೈಲ್‌ನಲ್ಲಿ ಹಲವು ಅಪ್ಲಿಕೇಶನ್‌ ಹೊಂದಿದ್ದು, ಪಾಕಿಸ್ತಾನ ಮೂಲದ ಮೊಬೈಲ್‌ ನಂಬರ್‌ಗಳ ಜೊತೆ ಚಾಟ್‌ ಮಾಡಿರುವುದು ಪತ್ತೆಯಾಗಿದೆ.

ಈತ ಪೇಂಟರ್‌ ಕೆಲಸಗಾರನ ಹೆಸರಿನಲ್ಲಿ ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ಬನ್ನಿಕೋಡು ಗ್ರಾಮದಲ್ಲಿ ವಾಸ್ತವಯ ಹೂಡಿದ್ದು, ಮಂಗಳವಾರ ಈತನ ಬಂಧನವಾಗಿತ್ತು. ಬುಧವಾರ ಈತನನ್ನು ತುಮಕೂರಿಗೆ ಕರೆದೊಯ್ಯಲಾಗಿದ್ದು, ವಿಚಾರಣೆ ಮಾಡಲಾಯಿತು. ಅಲ್ಲಾಭಕ್ಷಿ ಎನ್ನುವಾತನನ್ನು ತುಮಕೂರಿನಲ್ಲಿ ಬಂಧನ ಮಾಡಲಾಗಿತ್ತು. ಈತನ ಪ್ರಕರಣಕ್ಕೂ ಆತನ ಬಂಧನಕ್ಕೂ ಸಾಮ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರಣದಿಂದ ಈತನನ್ನು ತುಮಕೂರಿಗೆ ಕರೆದೊಯ್ಯಲಾಗಿತ್ತು. ನಂತರ ಹರಿಹರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಈತನಿಗೆ ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಿದೆ. ಗುರುವಾರ ಈತನನ್ನು ಕೋರ್ಟ್‌ಗೆ ಮತ್ತೆ ಹಾಜರುಪಡಿಸಲಾಗುವುದು.