ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಶ್ರೀರಾಮನಿಗೆ ಅವಮಾನಿಸಿ ವಿಕೃತಿ ಮೆರೆದಿರುವ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ಫೇಸ್ಬುಕ್ನಲ್ಲಿ ಶ್ರೀರಾಮ ಹಾಗೂ ಜಗದ್ಗುರು ರೇಣುಕಾಚಾರ್ಯರ ವಿರುದ್ಧ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕಿದ್ದಾರೆ.
ಬಸವಕಲ್ಯಾಣ ನಗರದ ಅಕ್ಕಮಹಾದೇವಿ ಮಹಾವಿದ್ಯಾಲಯದ ಆವರಣದಲ್ಲಿ ನಾಳೆ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶ ಆಯೋಜನೆಗೊಂಡಿದೆ. ಈ ಸಮಾವೇಶಕ್ಕೆ ಕನ್ನೇರಿ ಶ್ರೀಗಳ ಆಗಮನಕ್ಕೆ ಅನುಮತಿ ದೊರಕುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ವಿವಾದ ಸೃಷ್ಟಿಸಲಾಗಿದೆ.
ಬಸವಪರ ಸಂಘಟನೆಗಳ ಒಕ್ಕೂಟ ಎಂಬ ಹೆಸರಿನ ಫೇಸ್ಬುಕ್ ಖಾತೆಯಿಂದ ಶ್ರೀರಾಮ ಹಾಗೂ ರೇಣುಕಾಚಾರ್ಯರನ್ನು ʼತಾಲಿಬಾನಿಗಳುʼ ಎಂದು ನಿಂದನೆ ಮಾಡಿ, ಅತ್ಯಂತ ಕೀಳುಮಟ್ಟದ ಹಾಗೂ ಪ್ರಚೋದನಕಾರಿ ಪೋಸ್ಟ್ಗಳನ್ನು ಹಾಕಲಾಗಿದೆ.
ಸಾರ್ವಜನಿಕ ವಲಯದಲ್ಲಿ ಈ ಪೋಸ್ಟ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹಿಂದೂ ಮುಖಂಡ ಕೃಷ್ಣಗೋಣೆ ಅವರು ಬಸವಕಲ್ಯಾಣ ನಗರ ಪೊಲೀಸ್ ಠಾಣೆಗೆ ಈ ಕುರಿತು ಅಧಿಕೃತವಾಗಿ ದೂರನ್ನು ನೀಡಿದ್ದಾರೆ.
ಜಗದ್ಗುರು ಬಸವಣ್ಣನವರ ಪವಿತ್ರ ಹೆಸರನ್ನು ದುರುಪಯೋಗಪಡಿಸಿಕೊಂಡು ಹಿಂದೂ ದೇವರುಗಳಿಗೆ ಹಾಗೂ ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ದೂರು ಸ್ವೀಕರಿಸಿರುವ ಬಸವಕಲ್ಯಾಣ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.




