ಬೆಳ್ತಂಗಡಿ: ಐದೂವರೆ ಕೋಟಿ ಡ್ರಗ್ಸ್ ವಶ ಪ್ರಕರಣ; ಜಲೀಲ್ ಬಾಬಾ ವಿರುದ್ಧ ಪ್ರಕರಣ ದಾಖಲು
ಬೆಳ್ತಂಗಡಿ: ಬಾಗಲಕೋಟೆಯಲ್ಲಿ ಇತ್ತೀಚೆಗೆ ಪತ್ತೆಯಾಗಿರುವ ಐದೂವರೆ ಕೋಟಿ ರೂ.ಮೌಲ್ಯದ ಮಾದಕ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದಲ್ಲಿ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಬೆಳ್ತಂಗಡಿಯ ಆಂಬುಲೆನ್ಸ್ ಚಾಲಕ ಜಲೀಲ್ ಬಾಬಾ ಹೆಸರು ಕೂಡಾ ಇದರಲ್ಲಿ ಸೇರಿದೆ.
Sponsoredಮಂಗಳೂರು ನಗರ ಅಪರಾಧ ವಿಭಾಗ ಪೊಲೀಸರು ಮಂಗಳೂರಿನ ಪ್ರಿನ್ಸಿಪಾಲ್ ಸೆಶನ್ಸ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ ಪ್ರಾಥಮಿಕ ವರದಿಯಲ್ಲಿ ಇನ್ನೋರ್ವ ಆರೋಪಿಯಾಗಿ ಜಲೀಲ್ ಬಾಬಾ ಹೆಸರನ್ನು ಉಲ್ಲೇಖ ಮಾಡಲಾಗಿದ್ದು, ದಸ್ತಗಿರಿಗೆ ಬಾಕಿ ಎಂದು ವರದಿ ಸಲ್ಲಿಕೆ ಮಾಡಿರುವುದಾಗಿ ವರದಿಯಾಗಿದೆ.
ಈ ಪ್ರಕರಣದಲ್ಲಿ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಮೊಹಮ್ಮದ್ ಅಲ್ತಾಫ್ (28), ಉಜಿರೆ ಹಳೆಪೇಟೆಯ ಮೊಹಮ್ಮದ್ ಮುಸ್ತಫಾ (28), ಇಂದಬೆಟ್ಟು ಗ್ರಾಮದ ದೇವನಾರಿ ನಿವಾಸಿ ಅಲ್ಪಾಜ್ ಮತ್ತು ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ಎನ್ನುವವರ ವಿರುದ್ಧ ದೂರು ದಾಖಲು ಮಾಡಲಾಗಿದೆ. ಈ ಪೈಕಿ ಅಣ್ಣಪ್ಪ ಸ್ವಾಮಿ ಎಂಬಾತನನ್ನು ಆರಂಭದಲ್ಲಿಯೇ ಜೈಲಿಗಟ್ಟಿದ್ದು, ಉಳಿದ ಆರೋಪಿಳ ವಿರುದ್ಧವೂ ಕ್ರಮ ಜರುಗಿಸಲಾಗಿದೆ.
ಸಿಸಿಬಿ ಪೊಲೀಸರು ಕುಳಾಯಿಗುಡ್ಡೆ ವಾಟರ್ ಟ್ಯಾಂಕ್ ಸಮೀಪದ ಮನೆಯಲ್ಲಿ ನಡೆಸಿದ ದಾಳಿಯಲ್ಲಿ ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ಎಂಬಾತನಿಂದ ರೂ.1.50 ಲಕ್ಷ ಮೌಲ್ಯದ 15.17 ಗ್ರಾಂ ಎಂಡಿಎಂಎ ವಶಪಡಿಸಿದ್ದರು. ಈ ಪ್ರಕರಣದ ತನಿಖೆ ಸಂದರ್ಭ ಮಾದಕ ವಸ್ತು ಪೂರೈಕೆ ಜಾಲದ ಕುರಿತು ಮಾಹಿತಿ ಪಡೆದಿರುವ ಪೊಲೀಸರು ದೆಹಲಿಯಿಂದ ಎಂಡಿಎಂಎ ಖರೀದಿ ಮಾಡಿ ಬೆಂಗಳೂರಿಗೆ ಸಾಗಿಸುತ್ತಿದ್ದ ಜಾಲದ ಕುರಿತು ಸುಳಿವು ನೀಡಿರುವುದಾಗಿ ವರದಿಯಾಗಿದೆ.
ಜುಲೈ 15 ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಯಲ್ ಇನ್ ಲಾಡ್ಜ್ ಮೇಲೆ ದಾಳಿ ಮಾಡಿ ಮೂವರನ್ನು ಮತ್ತೆ ಬಂಧನ ಮಾಡಲಾಗಿತ್ತು, ಅವರಿಂದ ಅಂದಾಜು ಐದೂವರೆ ಕೋಟಿ ರೂ. ಮೌಲ್ಯದ ಒಟ್ಟು 5 ಕೆಜಿ 196 ಗ್ರಾಂ ಎಂಡಿಎಂಎ, ಕಾರು, ಬ್ಯಾಗ್ ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಲಾಗಿತ್ತು.
ಆರೋಪಿಗಳು ಕಾರಿನ ಮೂಲಕ ದೆಹಲಿಯಿಂದ ಎಂಡಿಎಂಎ ತಂದು, ಬೆಂಗಳೂರನ್ನು ಕೇಂದ್ರವಾಗಿಸಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ವಿವಿಧ ಭಾಗಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದರು ಎಂದು ಬಹಿರಂಗವಾಗಿದೆ.
ಪೊಲೀಸ್ ವಿಚಾರಣೆಯ ಸಂದರ್ಭ ಆರೋಪಿಗಳು ಹೇಳಿರುವ ಹಾಗೆ, ಜಲೀಲ್ ಬಾಬಾ ಎಂಬಾತ ತನ್ನ ಆಂಬುಲೆನ್ಸ್ ವಾಹನವನ್ನು ಇದಕ್ಕಾಗಿ ಬಳಕೆ ಮಾಡಿರುವುದಾಗಿ ಪತ್ತೆಯಾಗಿದೆ. ಅಲ್ಲದೆ ಖರೀದಿಗೆ ಹೋಗಿದ್ದ ಮೂವರು ಆರೋಪಿಗಳ ಜೊತೆ ನೇರ ನಂಟು, ಇತ್ತ ತಂದ ಮಾಲನ್ನು ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಮಾರಾಟ ಮಾಡುತ್ತಿರುವುದರಲ್ಲಿ ಪ್ರಮುಖ ಪಾತ್ರ ವಹಿಸಿರುವುದಾಗಿ ಆಪಾದಿಸಲಾಗಿದೆ.
ಬೆಳ್ತಂಗಡಿಯ ಆಂಬುಲೆನ್ಸ್ ಚಾಲಕ ಜಲೀಲ್ ಬಾಬಾ ಕಳೆದ ಆರು ದಿನಗಳಿಂದ ತಲೆಮರೆಸಿಕೊಂಡಿದ್ದು, ಈತನ ಮೊಬೈಲ್ ಫೋಸ್ ಸ್ವಿಚ್ಡ್ ಆಫ್ ಆಗಿದೆ. ತುರ್ತು ಆಂಬುಲೆನ್ಸ್ ಕರೆಯನ್ನು ಕೂಡಾ ಸ್ವೀಕರಿಸುತ್ತಿಲ್ಲ. ಈತನ ಪತ್ತೆಯಾಗಿ ಪೊಲೀಸರ ತಂಡ ಕಾರ್ಯಾಚರಣೆ ಮಾಡುತ್ತಿರುವುದಾಗಿ ವರದಿಯಾಗಿದೆ.



