ಪುತ್ತೂರು: ದರ್ಬೆಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಕುರಿತಂತೆ ಕೋಮು ಬಣ್ಣ ನೀಡುವ ಪ್ರಯತ್ನದ ಕುರಿತು ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಬೇಕು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮನವಿ ಮಾಡಿದ್ದಾರೆ.
Sponsoredಲ್ಯಾಮಿನೇಷನ್ ಯಂತ್ರದಲ್ಲಾದ ತಾಂತ್ರಿಕ ದೋಷದಿಂದ ದಾಖಲೆಯೊಂದು ಹಾನಿಗೊಳಗಾದ ಘಟನೆ ನಂತರ ಈ ವಿವಾದ ಉಂಟಾಗಿದೆ. ಈ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಬಹುದಿತ್ತು. ಅಗತ್ಯವಿದ್ದಲ್ಲಿ ಪೊಲೀಸ್ ಠಾಣೆ ಅಥವಾ ಸೂಕ್ತ ಕಾನೂನು, ಗ್ರಾಹಕ ವೇದಿಕೆಯನ್ನು ಸಂಪರ್ಕಿಸುವುದು ಸೂಕ್ತ ಕ್ರಮವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸುದರ್ಶನ್ ಪೈ ಅವರನ್ನು ಪೊಲೀಸರು ವಶಕ್ಕೆ ಪಡೆದ ನಂತರ ಕೆಲವು ಅತಿರೇಕದ ವರ್ತನೆ ಮಾಡಿದ್ದಾರೆ. ನೌಶಾದ್ ಎನ್ನುವಾತ ಪೊಲೀಸ್ ವಾಹನದೊಳಗೆ ಇಣುಕಿ ಕೃತ್ಯವೆಸಗಿರುವುದು, ಆಗ ವಾಹನದಲ್ಲಿದ್ದ ಸುದರ್ಶನ್ ಪೈ ಅವರ ತಂದೆಯ ವಿಚಾರಣೆ ಸೇರಿ ಇತರ ಸಾಕ್ಷ್ಯಾಧಾರಗಳನ್ನು ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುದರ್ಶನ್ ಪೈ ವಿರುದ್ಧ ಕೊಲೆ ಯತ್ನ, ಮಾದಕವಸ್ತು ದಂಧೆಗೆ ಕುರಿತಂತೆ ಪ್ರಕರಣ ಸೇರಿ ಹಿಂದಿನ ಪ್ರಕರಣಗಳಿಗೆ ಎಂದು ಪೊಲೀಸರು ತಿಳಿಸಿದ್ದಾರೆ. ನೌಶಾದ್ ವಿರುದ್ಧವೂ ರಸ್ತೆ ಜಗಳಕ್ಕೆ ಸಂಬಂಧಿಸಿದ ಹಲ್ಲೆ ಪ್ರಕರಣವಿದೆ. ಸದಾಶಿವ ಪೈ ವಿರುದ್ಧವೂ ರಸ್ತೆ ಜಗಳದ ಹಳೆಯ ಪ್ರಕರಣವಿದೆ. ಅಂಗಡಿಯ ಮುಂದೆ ಸೇರಿದ್ದ ಇತರ ಇಬ್ಬರ ಮೇಲೆಯೂ ತಲಾ ಒಂದೊಂದು ಹಳೆಯ ಪ್ರಕರಣಗಳಿದೆ ಎಂದು ಪೊಲೀಸರು ಹೇಳಿದ್ದಾರೆ.
ನೌಶಾದ್, ನಿಯಾಜ್, ಅಂಜನಾ ಪೈ, ಸದಾಶಿವ ಪೈ ಸೇರಿದಂತೆ ಇತರರ ಬಂಧನಕ್ಕೆ ಒತ್ತಾಯಿಸಲಾಗುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ಯಾವುದೇ ವ್ಯಕ್ತಿ ಅಪರಾಧ ಎಸಗಿರುವುದು ದೃಢಪಟ್ಟಲ್ಲಿ ಆತನ ಧರ್ಮ, ಸಮುದಾಯ ಅಥವಾ ಸಾಮಾಜಿಕ ಗುರುತನ್ನು ಪರಿಗಣಿಸದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಬಂಧನ ಸೇರಿದಂತೆ ಯಾವುದೇ ಕಾನೂನು ಕ್ರಮವು ಘಟನೆಯ ಸತ್ಯಾಸತ್ಯತೆ, ಲಭ್ಯವಿರುವ ಸಾಕ್ಷ್ಯಾಧಾರಗಳು ಹಾಗೂ ಕಾನೂನುಬದ್ಧ ಅಗತ್ಯತೆಗಳನ್ನು ಆಧರಿಸಿರುತ್ತದೆ. ಸಾರ್ವಜನಿಕ ಅಥವಾ ಕೋಮು ಒತ್ತಡಕ್ಕೆ ಮಣಿದು ಯಾರನ್ನೂ ಬಂಧಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆಯ ಕುರಿತು ಯಾರಿಗಾದರೂ ಸಂದೇಹಗಳಿದ್ದರೆ. ತಮ್ಮಲ್ಲಿರುವ ಸತ್ಯಾಂಶ ಹಾಗೂ ಸಾಕ್ಷ್ಯಾಧಾರಗಳೊಂದಿಗೆ ಪೊಲೀಸರನ್ನು ಸಂಪರ್ಕಿಸಿ ಚರ್ಚಿಸಲು ಅವಕಾಶವಿದೆ. ಗೊಂದಲ ನಿವಾರಣೆಗೆ ಅಗತ್ಯವಿರುವ ಎಲ್ಲ ಸತ್ಯಾಂಶ ಹಾಗೂ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಲು ಪೊಲೀಸರು ಸಿದ್ಧವಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಘಟನೆಯನ್ನು ಕೋಮು ವೈಷಮ್ಯದ ದೃಷ್ಟಿಕೋನದಲ್ಲಿ ಬಿಂಬಿಸಿ ಸಮುದಾಯಗಳ ನಡುವೆ ದ್ವೇಷ ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಿರುವಂತೆ ಕಂಡುಬರುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪ್ರಚೋದನಕಾರಿ ಅಥವಾ ದಾರಿತಪ್ಪಿಸುವ ಹೇಳಿಕೆಗಳನ್ನು ಪರಿಶೀಲಿಸದೆ ನಂಬಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಆ.23ರಂದು ಸಂಜೆ 5 ಗಂಟೆಗೆ ಪುತ್ತೂರು ಪೊಲೀಸ್ ಉಪಾಧೀಕ್ಷಕರ ಕಚೇರಿಯಲ್ಲಿ ಶಾಂತಿ ಸಭೆ ಆಯೋಜಿಸಲಾಗಿದೆ. ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿ ತಮ್ಮ ವಿನಂತಿ ಹಾಗೂ ಕಳವಳಗಳನ್ನು ಶಾಂತಿಯುತ ಮತ್ತು ರಚನಾತ್ಮಕ ರೀತಿಯಲ್ಲಿ ವ್ಯಕ್ತಪಡಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.




