ಭಾನುವಾರ, 25 ಅಕ್ಟೋಬರ್ 2026
Trending

ದಪ್ಪಗಿದ್ದೀಯಾ…ಮಗು ಆಗಲ್ಲವೆಂದು ಚುಚ್ಚಿ ಚುಚ್ಚಿ ಹೇಳಿ, ಹೆಂಡತಿಯ ಕತ್ತು ಹಿಸುಕಿ ಕೊಂದ ಪತಿ

image Credit: Asianet Suvarna

ಹೆಂಡತಿ ದಪ್ಪಗಿದ್ದಾಳೆ, ಆಕೆಗೆ ಮಗು ಹೆರಲು ಆಗಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ವರದಕ್ಷಿಣೆ ಆಸೆಗೆ ಇಲ್ಲೊಬ್ಬ ಪಾಪಿ ಪತಿ ತನ್ನ ಹೆಂಡತಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

Sponsored

ಪ್ರಿಯಾಂಕಾ ಕಮಲಾಕರ್‌ (29) ಕೊಲೆಯಾದ ಮಹಿಳೆ. ಆರೋಪಿ ಪತಿ ಬಸವರಾಜ್‌ ವಡ್ಡರ್‌ ಹಾಗೂ ಆತನಿಗೆ ಸಾಥ್‌ ನೀಡಿದ ಮೂವರನ್ನು ನವಲಗುಂದ ಪೊಲೀಸರು ಬಂಧನ ಮಾಡಿದ್ದಾರೆ.

ಮೃತ ಪ್ರಿಯಾಂಕಾ ಹಾಗೂ ಆರೋಪಿ ಬಸವರಾಜ್‌ ಅವರ ವಿವಾಹ ಕಳೆದ 2024 ರಲ್ಲಿ ನಡೆದಿತ್ತು. ಮದುವೆಯಾದ ಕೆಲವು ತಿಂಗಳ ನಂತರ ಚೆನ್ನಾಗಿಯೇ ಇದ್ದ ಈ ದಂಪತಿಗಳ ಸಂಸಾರದಲ್ಲಿ ಜಗಳ ಪ್ರಾರಂಭವಾಗಿದೆ. ಮದುವೆಯಾದ ಒಂದೇ ವರ್ಷದಲ್ಲಿ ಪತಿ ಮತ್ತು ಆತನ ಕುಟುಂಬದವರು ಪ್ರಿಯಾಂಕಾಗೆ ವರದಕ್ಷಿಣೆ ತರುವಂತೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಂತೆ.

ವರದಕ್ಷಿಣೆ ಜೊತೆಗೆ ಪ್ರಿಯಾಂಕಾ ಕೊಂಚ ದಪ್ಪಗಿದ್ದಾರೆ ಎನ್ನುವ ಕಾರಣವನ್ನು ಮುಂದಿಟ್ಟು ನಿತ್ಯ ಜಗಳ ಕಾಯುತ್ತಿ ಬಸವರಾಜ್‌. ಆಕೆ ದಪ್ಪಗಿದ್ದಾಳೆ ಎಂದು ನಿಷ್ಠುರವಾಗಿ ಚುಚ್ಚಿ ಚುಚ್ಚಿ ಮಾತನಾಡಿ ಹಿಂಸಿಸುತ್ತಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗುತ್ತಿತ್ತು.

ಕಳೆದ ಸೋಮವಾರ ರಾತ್ರಿ ಹಣಸಿ ಗ್ರಾಮದಲ್ಲಿ ಪತಿ ಪತ್ನಿ ನಡುವೆ ಇದೇ ವಿಷಯಕ್ಕೆ ಮತ್ತೆ ದೊಡ್ಡ ಜಗಳವಾಗಿದೆ. ಕೋಪದಲ್ಲಿ ಬಸವರಾಜ್‌ ಪ್ರಿಯಾಂಕಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಪ್ರಿಯಾಂಕಾ ಸಾವಿನ ಅನುಮಾನಗೊಂಡು ತವರು ಮನೆಯವರು ಪೊಲೀಸರಿಗೆ ದೂರನ್ನು ನೀಡಿದ್ದಾರೆ.

ಬಸವರಾಜ್‌ (ಪತಿ), ರೇಣವ್ವ, ಸುಭಾಷ್‌, ಸಿದ್ದರಾಮೇಶ್‌ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. ಪೊಲೀಸರ ತನಿಖೆ ಮುಂದುವರಿದಿದೆ.