ಸೋಮವಾರ, 26 ಅಕ್ಟೋಬರ್ 2026
Trending

ಸುಹಾಸ್ ಶೆಟ್ಟಿ ಹತ್ಯೆಗೆ ಸೇಡು ತಿರಿಸಿಕೊಳ್ಳಲು ₹24 ಲಕ್ಷ ಸುಪಾರಿ, ಕೊಲೆಗೆ ಸ್ಕೆಚ್- FIR ದಾಖಲು

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲು ಬರೋಬ್ಬರಿ 25 ಲಕ್ಷ ರೂಪಾಯಿ ಸುಪಾರಿ ಡೀಲ್ ಮಾತನಾಡಲಾಗಿದ್ದ ಗಂಭೀರ ಆರೋಪ ಕೇಳಿಬಂದಿದೆ. ಹೀಗಾಗಿ ಕರಾವಳಿ ಭಾಗದಲ್ಲಿ ಮತ್ತೆ ಪ್ರತೀಕಾರದ ಹೆಸರಿನಲ್ಲಿ ರಕ್ತಪಾತ ಹರಿಸಲು ದೊಡ್ಡ ಮಟ್ಟದ ಸಂಚು ನಡೆದಿತ್ತೇ ಎಂಬ ಗಂಭೀರ ಅನುಮಾನವೊಂದು ಕಾಡತೊಡಗಿದೆ ಎಂದು ವರದಿಯಾಗಿದೆ 

Sponsored

ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ನಿವಾಸಿ ಅಭಿಷೇಕ್ (25) ಎಂಬವರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಉಡುಪಿಯ ಸುದೀಪ್ ಹಾಗೂ ಆತನ ಸಹಚರರ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣದ ಗಂಭೀರತೆ ಪರಿಗಣಿಸಿ ಮುಂದಿನ ತನಿಖೆಯನ್ನು ಮಂಗಳೂರು ನಗರ ಸಿಸಿಬಿ (CCB) ಪೊಲೀಸರಿಗೆ ವಹಿಸಲಾಗಿದೆ. 

2025ರ ಮೇ ತಿಂಗಳಲ್ಲಿ ಸುಹಾಸ್ ಶೆಟ್ಟಿ ಹತ್ಯೆಯಾದ ಬಳಿಕ ಉಡುಪಿಯ ಸುದೀಪ್ ಎಂಬಾತ ಅಭಿಷೇಕ್‌ನನ್ನು ಸಂಪರ್ಕಿಸಿದ್ದ. “ಒಬ್ಬ ಹಿಂದುವಿನ ಹತ್ಯೆಗೆ ಪ್ರತಿಯಾಗಿ ಮುಸ್ಲಿಂ ವ್ಯಕ್ತಿಯನ್ನು ಕೊಲೆ ಮಾಡಲೇಬೇಕು” ಎಂದು ಪ್ರತೀಕಾರದ ಮಾತುಗಳನ್ನಾಡಿ, ಕೊಲೆ ಕೃತ್ಯ ಎಸಗಲು ಪ್ರಚೋದನೆ ನೀಡಿದ್ದ ಎಂದು ಆರೋಪಿಸಲಾಗಿದೆ.

ನಾಲ್ಕು ತಿಂಗಳ ಹಿಂದೆ ಅಭಿಷೇಕ್ ಹಾಗೂ ಆತನ ಸ್ನೇಹಿತ ಕೀರ್ತನ್‌ನನ್ನು ಉಡುಪಿಗೆ ಕರೆಸಿಕೊಂಡಿದ್ದ ಸುದೀಪ್, ಮಹೇಶ್ ಎಂಬಾತನನ್ನು ಪರಿಚಯಿಸಿ ಕೊಲೆಯ ಸ್ಕೆಚ್ ರೂಪಿಸಿದ್ದ. ಬಜ್ಪೆ ಕಿನ್ನಿಪದವಿನ ವ್ಯಕ್ತಿಯೊಬ್ಬರ ಫೋಟೋ ನೀಡಿ, ಆತನನ್ನೇ ಹತ್ಯೆ ಮಾಡಲು ಸೂಚಿಸಲಾಗಿತ್ತು. ಈ ಕೃತ್ಯವನ್ನು ಯಶಸ್ವಿಯಾಗಿ ಎಸಗಿದರೆ ಒಟ್ಟು 24 ರಿಂದ 25 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಲಾಗಿತ್ತು. ಅಷ್ಟೇ ಅಲ್ಲದೆ, ಜೈಲಿಗೆ ಹೋದರೆ ಕುಟುಂಬದ ನಿರ್ವಹಣೆಗೆ ಪ್ರತಿ ತಿಂಗಳು 15,000 ರೂ. ನಗದು ಹಾಗೂ 5,000 ರೂ. ಮೌಲ್ಯದ ದಿನಸಿ ಸಾಮಗ್ರಿ ಕೊಡುವುದಾಗಿ ಆಮಿಷ ಒಡ್ಡಲಾಗಿತ್ತು. ಈ ಸುಪಾರಿ ಒಪ್ಪಿಕೊಂಡಿದ್ದ ಅಭಿಷೇಕ್, ಕೊಲೆಗಾಗಿ ಎರಡು ತಲವಾರ್‌ಗಳನ್ನು ಸಹ ಸಿದ್ಧಪಡಿಸಿಕೊಂಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾನೆ.

ಇಷ್ಟೆಲ್ಲಾ ಭೀಕರ ಸಿದ್ಧತೆಗಳ ನಡುವೆ, ದೂರುದಾರ ಅಭಿಷೇಕ್ ಪತ್ನಿ ಹೆರಿಗೆಯಾದ ಕಾರಣ ಆತನಿಗೆ ಮನಪರಿವರ್ತನೆಯಾಗಿದೆ. ಒಂದು ವೇಳೆ ಅಪರಾಧ ಕೃತ್ಯ ಎಸಗಿ ಜೈಲು ಪಾಲಾದರೆ ತನ್ನ ಹೊಸ ಕುಟುಂಬ ಹಾಗೂ ಮಗುವಿನ ಭವಿಷ್ಯವೇನು ಎಂಬ ಭಯದಿಂದ ಆತ ಕೃತ್ಯದಿಂದ ಹಿಂದೆ ಸರಿದಿದ್ದಾನೆ. ಬಳಿಕ ತಡಮಾಡದೆ, ಸಂಚಿಗೆ ಸಂಬಂಧಿಸಿದ ವಾಟ್ಸಾಪ್ ಚಾಟ್‌ಗಳು, ಸ್ಕ್ರೀನ್‌ಶಾಟ್‌ಗಳು ಹಾಗೂ ಸಂಭಾಷಣೆಯ ಆಡಿಯೋ ಸಾಕ್ಷ್ಯಗಳ ಸಮೇತ ಬಜ್ಪೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ.

ಬಳಿಕ ಆರೋಪಿಗಳೊಂದಿಗೆ ನಡೆಸಿದ್ದ ವಾಟ್ಸಾಪ್ ಚಾಟ್‌ಗಳು, ಯುಪಿಐ ಹಣ ವರ್ಗಾವಣೆ ಸಾಕ್ಷ್ಯಗಳು ಮತ್ತು ಸ್ಕ್ರೀನ್‌ಶಾಟ್‌ಗಳ ಸಮೇತ ಬಜಪೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.ದೂರಿನ ಆಧಾರದಲ್ಲಿ ಬಜಪೆ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 55 ಹಾಗೂ 61(2)(a) ಅಡಿಯಲ್ಲಿ ಪ್ರಕರಣ (ಅ.ಕ್ರ: 155/2026) ದಾಖಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಹೆಚ್.ಸುಧೀರ್ ಕುಮಾರ್ ರೆಡ್ಡಿ ಅವರು ಮಾತನಾಡಿ, “ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ. ಪ್ರಾಥಮಿಕ ಮಾಹಿತಿಯಂತೆ ಎಫ್‌ಐಆರ್ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಮಾನ್ಯವಾಗುವ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದೇವೆ. ಸದ್ಯಕ್ಕೆ ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.