ಶನಿವಾರ, 24 ಅಕ್ಟೋಬರ್ 2026

ಮಂಗಳೂರು: ಕೂಳೂರು ಬಳಿ ಕಂಟೈನರ್‌ ಲಾರಿ-ಸ್ಕೂಟರ್‌ ಭೀಕರ ಅಪಘಾತ, ಸವಾರ ಸಾವು

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ರ ಕೂಳೂರು ವಿ.ಆರ್‌.ಎಲ್‌ ಕಚೇರಿ ಎದುರು ಶುಕ್ರವಾರ (ನಿನ್ನೆ) ಸಂಜೆ ಕಂಟೈನರ್‌ ಲಾರಿಯೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸವಾರ ಸಾವಿಗೀಡಾಗಿರುವ ಘಟನೆ ನಡೆದಿದೆ.

ಮೃತರನ್ನು ಸದಾನಂದ ಶೆಟ್ಟಿಗಾರ್‌ (46) ಎಂದು ಗುರುತಿಸಲಾಗಿದೆ.

ಜು.3 ರ ಸಂಜೆ 6 ಗಂಟೆ ಸುಮಾರಿಗೆ ಸದಾನಂದ ಶೆಟ್ಟಿಗಾರ್‌ ಅವರು ತಮ್ಮ ಸ್ಕೂಟರ್‌ನಲ್ಲಿ ಕೊಟ್ಟಾರ ಕಡೆಯಿಂದ ಉಡುಪಿ ಕಡೆಗೆ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಚಲಿಸುತ್ತಿದ್ದ ಕಂಟೈನರ್‌ ಲಾರಿಯ ಚಾಲಕ ಮಹಮ್ಮದ್‌ ಅಜರುದ್ದೀನ್‌ ಎನ್ನುವಾತ ತನ್ನ ವಾಹನವನ್ನು ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಸ್ಕೂಟರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಸ್ಕೂಟರ್‌ ಸವಾರ ಸದಾನಂದ ರಸ್ತೆಗೆ ಬಿದ್ದಿದ್ದು, ಕಂಟೈನರ್‌ ಲಾರಿಯ ಚಕ್ರಗಳು ಅವರ ಮೇಲೆ ಹರಿದಿದೆ. ಪರಿಣಾಮ ಗಂಭೀರ ಸ್ವರೂಪದ ಗಾಯವಾಗಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಘಟನಾ ಸ್ಥಳಕ್ಕೆ ಮಂಗಳೂರು ನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಲಾರಿ ಚಾಲಕ ಮಹಮ್ಮದ್‌ ಅಜರುದ್ದೀನ್‌ನ ಬೇಜವಾಬ್ದಾರಿತನದ ಚಾಲನೆಯೇ ಅಪಘಾತಕ್ಕೆ ನೇರ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ವರದಿಯಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.