ಶನಿವಾರ, 24 ಅಕ್ಟೋಬರ್ 2026

ಆತ್ಮಹತ್ಯೆಗೆಂದು ಹೇಮಾವತಿಗೆ ಹಾರಿದ – ನೀರಿಲ್ಲದೆ ಮರಳಿನ ಮೇಲೆ ಬಿದ್ದ!!

ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ವ್ಯಕ್ತಿ ಒಬ್ಬರು ಹೇಮಾವತಿಯ ನದಿಗೆ ಹಾರಿದ್ದಾನೆ. ಆದರೆ ನದಿಯಲ್ಲಿ ನೀರಿಲ್ಲದ ಕಾರಣ ಆತ ಸೀದಾ ಮರಳಿನ ಮೇಲೆ ಬಿದ್ದಿದ್ದಾನೆ. ಬಳಿಕ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿಗಳು ಬಂದು ಆತನನ್ನು ರಕ್ಷಣೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.

ಹಾಸನ ಮೂಲದ ಚಿರಂತ್ (38) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಚಿರಂತ್ ರಾಷ್ಟ್ರೀಯ ಹೆದ್ದಾರಿ 75ರ ಬಿಎಂ ರಸ್ತೆಯ ಮಳಲಿ ಬೈಪಾಸ್‌ನಲ್ಲಿರುವ ಹೇಮಾವತಿ ಸೇತುವೆಯಿಂದ ನದಿಗೆ ಜಿಗಿದಿದ್ದಾನೆ. ಚಿರಂತ್ ಜಿಗಿದಿದ್ದನ್ನು ಕಂಡು ಸ್ಥಳೀಯರು ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. 

ನೀರು ಕಡಿಮೆ ಇದ್ದ ಕಾರಣ ಚಿರಂತ್‌ ಮರಳಿನ ಮೇಲೆ ಬಿದ್ದಿದ್ದಾನೆ. ಸದ್ಯ ಅಗ್ನಿಶಾಮಕದಳ ಹಾಗೂ ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಚಿರಂತ್‌ನನ್ನು ರಕ್ಷಿಸಲಾಗಿದೆ. ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ