Home » AI ಗೆ ಮುಖ ಬಾಡಿಗೆ ಕೊಟ್ಟು ಹಣ ಗಳಿಕೆ- ಶುರುವಾಯಿತು ಹೊಸ ಬ್ಯುಸಿನೆಸ್

AI ಗೆ ಮುಖ ಬಾಡಿಗೆ ಕೊಟ್ಟು ಹಣ ಗಳಿಕೆ- ಶುರುವಾಯಿತು ಹೊಸ ಬ್ಯುಸಿನೆಸ್

0 comments

ಪ್ರಪಂಚದಾದ್ಯಂತ ಎಐ ಪರ್ವ ಜೋರಾಗಿದೆ. ಇಂದು ಎ ಐ ಯಾವುದು, ನೈಜವಾಗಿರುವುದು ಯಾವುದು ಎಂದು ವ್ಯತ್ಯಾಸಗಳನ್ನು ಹೇಳಲಾಗದಷ್ಟು ಇದು ಜಗತ್ತನ್ನು ವ್ಯಾಪಿಸಿದೆ. ದಿನ ಕಳೆದಂತೆ ಇದು ತಂತ್ರಜ್ಞಾನದಲ್ಲಿ ಕ್ರಾಂತಿಯನ್ನು ಸೃಷ್ಟಿಸುತ್ತಿದ್ದು ಎಲ್ಲರನ್ನು ಬೆರಗಾಗಿಸುತ್ತಿದೆ. ಇದೀಗ ಎಐ ನಲ್ಲಿ ಬಂದಿರುವ ಒಂದು ಅಪ್ಡೇಟ್ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದೆ. ಅದೇನೆಂದರೆ ನೀವು ನಿಮ್ಮ ಮುಖವನ್ನು ಬಾಡಿಗೆ ಕೊಟ್ಟು ಇದರಲ್ಲಿ ಹಣವನ್ನು ಗಳಿಸಬಹುದು.

ಹೌದು, ಚೀನಾದಲ್ಲಿ ಈಗ ಸಾರ್ವಜನಿಕರು ತಮ್ಮ ಮುಖಗಳನ್ನೇ AI ಗೆ ಬಾಡಿಗೆಗೆ ಕೊಟ್ಟು ಹಣ ಗಳಿಸುವ ಹೊಸದೊಂದು ಡಿಜಿಟಲ್ ಸೈಡ್ ಬಿಸಿನೆಸ್ ಶುರುವಾಗಿದೆ. ನೀವು ಕೆಲಸಕ್ಕೆ ಹೋಗದಿದ್ದರೂ ನಿಮ್ಮ ಮುಖದ ಡಿಜಿಟಲ್ ರೂಪ ಶಾರ್ಟ್ ಫಿಲ್ಮ್‌ಗಳು, ಜಾಹೀರಾತುಗಳು ಮತ್ತು ಗೇಮ್‌ಗಳಲ್ಲಿ ನಟಿಸಿ ನಿಮಗಾಗಿ ಹಣಗಳಿಸಿ ಕೊಡಲಿದೆ. ಇದನ್ನು ‘ಫೇಸ್ ಲೈಸೆನ್ಸಿಂಗ್’ ಎಂದು ಕರೆಯಲಾಗುತ್ತಿದೆ

ಏನಿದು ಫೇಸ್ ಲೈಸೆನ್ಸಿಂಗ್?

ಚೀನಾದ ಎಐ ಚಲನಚಿತ್ರ ತಯಾರಿಕಾ ಸಂಸ್ಥೆಗಳು ಮತ್ತು ಆಯಪ್‌ಗಳು ‘ಫೇಸ್ ಲೈಸೆನ್ಸಿಂಗ್’ ವ್ಯವಸ್ಥೆಯನ್ನು ಪರಿಚಯಿಸಿವೆ. ಜನರು ಈ ಪ್ಲಾಟ್‌ಫಾರ್ಮ್‌ಗಳಲ್ಲಿ ನೋಂದಾಯಿಸಿಕೊಂಡು, ಗುರುತಿನ ಚೀಟಿ ಹಾಗೂ ಮುಖದ ಡಿಜಿಟಲ್ ಪ್ರೊಫೈಲ್ ರೂಪಿಸುತ್ತಾರೆ. ಶಾರ್ಟ್ ಡ್ರಾಮಾ ಅಥವಾ ಜಾಹೀರಾತು ತಯಾರಿಸುವ ಸಂಸ್ಥೆಗಳು ಈ ಪ್ರೊಫೈಲ್‌ಗಳನ್ನು ನೋಡಿ ತಮಗೆ ಬೇಕಾದ ಮುಖಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಆಯ್ಕೆಯಾದ ಮುಖಗಳಿಗೆ ಎಐ ತಂತ್ರಜ್ಞಾನದ ಮೂಲಕ ಜೀವ ತುಂಬಿ ಕಥೆಗೆ ತಕ್ಕಂತೆ ನಟಿಸುವಂತೆ ಮಾಡಲಾಗುತ್ತದೆ.

ಗಳಿಕೆ ಎಷ್ಟು?

ವರದಿಗಳ ಪ್ರಕಾರ, ಬ್ಯಾಂಕ್ ಉದ್ಯೋಗಿಯೊಬ್ಬರ ಮುಖವನ್ನು ಜಾಹೀರಾತು ಸಂಸ್ಥೆಯೊಂದು ಕೇವಲ 3 ದಿನಗಳಲ್ಲಿ 7 ಬಾರಿ ಬಳಸಿದ್ದಕ್ಕೆ ಅವರಿಗೆ ಸುಮಾರು ₹30,000 (2,500 ಯುವಾನ್) ಸಿಕ್ಕಿದೆ. ಸಣ್ಣ ಮಟ್ಟದ ಶಾರ್ಟ್ ಡ್ರಾಮಾಗಳಲ್ಲಿ ಪ್ರತಿ ಕಂತಿಗೆ (Episode) ₹1,200 ರಿಂದ ₹6,000 ವರೆಗೆ ಪಾವತಿಸಲಾಗುತ್ತಿದೆ. ಒಟ್ಟಾರೆಯಾಗಿ ಮಾರುಕಟ್ಟೆಯಲ್ಲಿ ಪ್ರತಿ ಬಳಕೆಗೆ ₹600 ರಿಂದ ಹಿಡಿದು ಗರಿಷ್ಠ ₹12 ಲಕ್ಷದವರೆಗೆ  ಆದಾಯ ಗಳಿಸುವ ಅವಕಾಶವಿದೆ ಎಂದು ಹೇಳಲಾಗಿದೆ. 

ಸದ್ಯ ಏಜೆನ್ಸಿಗಳು ಕಾಲೇಜು ವಿದ್ಯಾರ್ಥಿಗಳು, ಸಣ್ಣ ಮಟ್ಟದ ಮಾಡೆಲ್‌ಗಳು ಹಾಗೂ ಸಾಮಾನ್ಯ ಉದ್ಯೋಗಿಗಳನ್ನು ಸಂಪರ್ಕಿಸಿ ಅವರ ಮುಖ ಮತ್ತು ಧ್ವನಿಯನ್ನು ಬಳಸಲು ಒಪ್ಪಂದ ಮಾಡಿಕೊಳ್ಳುತ್ತಿವೆ. ಕೆಲವರು ತಮ್ಮ ಮುಖವನ್ನು ನಿರ್ದಿಷ್ಟ ಉತ್ಪನ್ನಗಳಾದ ಬಟ್ಟೆ ಅಥವಾ ಕಾಸ್ಮೆಟಿಕ್ಸ್‌ ಜಾಹೀರಾತುಗಳಿಗೆ ಮಾತ್ರ ಬಳಸಬೇಕು ಎಂಬ ಷರತ್ತುಗಳನ್ನೂ ವಿಧಿಸುತ್ತಿದ್ದಾರೆ.

ದೊಡ್ಡ ಅಪಾಯ!

ಈ ಸೈಡ್ ಬಿಸಿನೆಸ್‌ನಿಂದ ಸುಲಭವಾಗಿ ಹಣಗಳಿಸಬಹುದಾದರೂ, ಇದರಲ್ಲಿ ಹಲವು ಆತಂಕಗಳೂ ಇವೆ. ನಿಮ್ಮ ಮುಖದ ಡಿಜಿಟಲ್ ಡೇಟಾವನ್ನು ಒಮ್ಮೆ ನೀಡಿದರೆ, ಅದನ್ನು ಮುಂದೆ ಯಾವುದಕ್ಕೆ ಬಳಸಬಹುದು ಎಂಬ ನಿಯಂತ್ರಣ ನಿಮ್ಮ ಕೈಯಲ್ಲಿರುವುದಿಲ್ಲ. ಅನುಮತಿ ಇಲ್ಲದೆ ಬೇರೆ ಲೈಂಗಿಕ ಅಥವಾ ಅಪರಾಧ ಹಿನ್ನೆಲೆಯ ಕಂಟೆಂಟ್‌ಗಳಿಗೆ ಬಳಕೆಯಾಗುವ ಅಪಾಯವಿರುತ್ತದೆ. ನಿಮ್ಮ ಡಿಜಿಟಲ್ ಅನನ್ಯತೆ ಮತ್ತು ಹಕ್ಕುಗಳನ್ನು ಶಾಶ್ವತವಾಗಿ ಕಳೆದುಕೊಳ್ಳುವ ಭೀತಿಯೂ ಇರುತ್ತದೆ. ಅಲ್ಲದೆ ಇದರಿಂದ ಅನೇಕ ಉದ್ಯೋಗಗಳು ಕಡಿತವಾಗುವ ಸಂಭವಗಳು ಕೂಡ ಹೆಚ್ಚಿದೆ. 

You may also like