ಮುಖ್ಯ ಚುನಾವಣಾ ಆಯುಕ್ತರಾಗಿರುವ ಜ್ಞಾನೇಶ್ ಕುಮಾರ್ ಅವರು 48 ಗಂಟೆಗಳಲ್ಲಿ ರಾಜೀನಾಮೆಯನ್ನು ಕೊಡಬೇಕು. ಇಲ್ಲದಿದ್ದರೆ ದೇಶಾದ್ಯಂತ ಹೋರಾಟವನ್ನು ನಡೆಸಲಾಗುವುದು ಎಂದು ಕಾಕ್ರೋಚ್ ಜನತೆಯ ಪಾರ್ಟಿಯು ಎಚ್ಚರಿಕೆ ನೀಡಿದೆ.
ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಭಿಜಿತ್ ದೀಪ್ಕೆ, 48 ಗಂಟೆಗಳ ಒಳಗೆ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡದಿದ್ದರೆ ಸಿಜೆಪಿ ದೇಶಾದ್ಯಂತ ಹೋರಾಟ ನಡೆಸಲಿದೆ. ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ನಾವು ಹಿಂದೆ ಸರಿಯೋದಿಲ್ಲ ಎಂದು ಎಚ್ಚರಿಸಿದ್ದಾರೆ.
ಅಲ್ಲದೆ ʻಇಂಡಿಯನ್ ಎಕ್ಸ್ಪ್ರೆಸ್ ವರದಿಯು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ದೇಶದ ಅತಿದೊಡ್ಡ ದೇಶದ್ರೋಹಿ, ದೇಶವಿರೋಧಿ ವ್ಯಕ್ತಿ ಎಂಬುದನ್ನ ಸಾಬೀತುಪಡಿಸುತ್ತದೆ. ಅವರು ತಕ್ಷಣ ರಾಜೀನಾಮೆ ನೀಡಬೇಕು. ಭಾರತದ ಪ್ರಜಾಪ್ರಭುತ್ವಕ್ಕೆ ಅವರಿಂದ ಅತ್ಯಂತ ದೊಡ್ಡ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದರಲ್ಲದೇ, ಜ್ಞಾನೇಶ್ ಕುಮಾರ್ ಮುಖ್ಯ ಚುನಾವಣಾ ಆಯುಕ್ತರಾದ ಬಳಿಕ ಯಾರು ಮತ ಚಲಾಯಿಸಬೇಕು? ಯಾರು ಮತ ಚಲಾಯಿಸಬಾರದು ಎಂಬುದನ್ನ ಸರ್ಕಾರ ನಿರ್ಧರಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
CJP ಮುಂದಿಟ್ಟ ಪ್ರಮುಖ ಬೇಡಿಕೆಗಳು :
* ಜ್ಞಾನೇಶ್ ಕುಮಾರ್ ತಕ್ಷಣ ರಾಜೀನಾಮೆ ನೀಡಬೇಕು. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಅಲ್ಲದೆ, ಜ್ಞಾನೇಶ್ ಕುಮಾರ್ಗೆ ಆದೇಶ ನೀಡಿದವರು ಯಾರು? ಎಂಬ ಪ್ರಶ್ನೆಗೆ ಉತ್ತರ ನೀಡಬೇಕು.
* ಮುಂಬರುವ ಎಲ್ಲಾ ಚುನಾವಣೆಗಳನ್ನ ತಕ್ಷಣ ತಡೆಹಿಡಿಯಬೇಕು. SIR ಪ್ರಕ್ರಿಯೆಯನ್ನ ಸ್ಥಗಿತಗೊಳಿಸಿ, 2025ರ ಜನವರಿಯ ಮತದಾರರ ಪಟ್ಟಿಗೆ ಹಿಂದಿರುಗಬೇಕು.
* SIRಗೆ ಸಂಬಂಧಿಸಿದ ಸಂಪೂರ್ಣ ನಿರ್ಧಾರ ಪ್ರಕ್ರಿಯೆ ಹಾಗೂ ಸಂಬಂಧಿತ ಕ್ರಮಗಳನ್ನು ಪರಿಶೀಲಿಸಲು ಸ್ವತಂತ್ರ ತನಿಖಾ ಆಯೋಗ ರಚಿಸಬೇಕು.
* ಮುಂದೆ ಚುನಾವಣಾ ಆಯೋಗದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಕಡತಗಳು ನಾಶವಾಗಿದೆ ಅಥವಾ ಕಾಣೆಯಾಗಿವೆ ಅಂತಾ ಯಾರೊಬ್ಬರೂ ಹೇಳದಂತೆ ಎಲ್ಲಾ ದಾಖಲೆಗಳನ್ನ ಸುರಕ್ಷಿತವಾಗಿ ನ್ಯಾಯಾಲಯದ ವಶಕ್ಕೆ ತೆಗೆದುಕೊಳ್ಳಬೇಕು.
* ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದ 2023ರ ಕಾನೂನನ್ನ ರದ್ದುಪಡಿಸಿ, ನಾಗರಿಕ ಸಮಾಜದ ಸದಸ್ಯರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವಂತಹ ಹೊಸ ಕಾನೂನು ರೂಪಿಸಬೇಕು.



