ಶನಿವಾರ, 24 ಅಕ್ಟೋಬರ್ 2026

ಅಪಘಾತದಲ್ಲಿ ಯುವಕನ ಮೆದುಳು ನಿಷ್ಕ್ರಿಯ – ಅಂಗಾಂಗ ದಾನಕ್ಕೆ ಮುಂದಾದ ಕುಟುಂಬ!!

ಉಳ್ಳಾಲದ ಕುತ್ತಾರು ಬಳಿ ಸೋಮವಾರ ರಾತ್ರಿ ನಡೆದಿದ್ದ ಬೈಕ್ ಮತ್ತು ಸ್ಕೂಟರ್ ನಡುವಿನ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಯುವಕನ ಮೆದುಳು ನಿಷ್ಕ್ರಿಯಗೊಂಡಿದ್ದು,ವೈದ್ಯರ ಸಲಹೆಯಂತೆ ಪೋಷಕರು ಯುವಕನ ಅಂಗಾಂಗ ದಾನ ಪ್ರಕ್ರಿಯೆಗೆ ಮುಂದಾಗಿದ್ದಾರೆ.

ಕುತ್ತಾರು ಆಯೆರೆ ಬೆಟ್ಟು ನಿವಾಸಿ ಗೋಪಾಲ ಹಾಗೂ ವೇದಾವತಿ ದಂಪತಿಯ ಕಿರಿಯ ಪುತ್ರ ವರ್ಷಿತ್ ಕುಲಾಲ್ (21) ಅಪಘಾತದಲ್ಲಿ ಗಾಯಗೊಂಡ ಯುವಕ. 

ವರ್ಷಿತ್‌ ಸೋಮವಾರ ರಾತ್ರಿ 7.30 ರ ಹೊತ್ತಿಗೆ ಕುತ್ತಾರಿನಿಂದ ತನ್ನ ಮನೆಯ ಕಡೆ ತೆರಳುತ್ತಿದ್ದಾಗ ಕುತ್ತಾರುವಿನ ಆಟೋ ವರ್ಕ್ ಶಾಪ್ ಮುಂಭಾಗದಲ್ಲಿ ರಾಣಿಪುರದಿಂದ ಕುತ್ತಾರು ಕಡೆಗೆ ಬರುತ್ತಿದ್ದ ಸ್ಕೂಟ‌ರ್ ಮತ್ತು ವರ್ಷಿತ್ ನ ಬೈಕ್ ಮುಖಾಮುಖಿ ಢಿಕ್ಕಿ ಹೊಡೆದಿದೆ.

ಢಿಕ್ಕಿಯ ರಭಸಕ್ಕೆ ಬೈಕಿನಿಂದ ರಸ್ತೆಗೆಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡಿದ್ದ ವರ್ಷಿತ್‌ನನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇಂದು ಯೆನೆಪೋಯ ಆಸ್ಪತ್ರೆಯ ವೈದ್ಯರು ವರ್ಷಿತ್ ನ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಿಸಿದ್ದಾರೆ. ವರ್ಷಿತ್ ಅವಿವಾಹಿತನಾಗಿದ್ದು, ಫ್ಯಾಬ್ರಿಕೇಷನ್ ಕೆಲಸ ನಿರ್ವಹಿಸುತ್ತಿದ್ದನೆನ್ನಲಾಗಿದೆ. ಸದ್ಯ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.