ಭಾನುವಾರ, 25 ಅಕ್ಟೋಬರ್ 2026
Trending

ಮೈತುಂಬ ಒಡವೆ ಹಾಕಿ ಇನ್​ಸ್ಟಾಗ್ರಾಂನಲ್ಲಿ ಫೋಟೋ ಅಪ್ಲೋಡ್ ಮಾಡಿದ ಮಹಿಳೆ – ಮರುದಿನ ಒಂದನ್ನು ಬಿಡದೆ ಕದ್ದೊಯ್ದ ಕಳ್ಳರು

ತಮ್ಮಲ್ಲಿರುವ ಸಂಪತ್ತು ಅಥವಾ ಆಡಂಬರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡರೆ ನಮ್ಮ ಪ್ರೆಸ್ಟೀಜ್ ಹೆಚ್ಚುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಅದು ಯಾವೆಲ್ಲ ಸಮಸ್ಯೆಗಳನ್ನು ತಂದೊಡುತ್ತದೆ ಎಂಬುದಕ್ಕೆ ಇದೀಗ ಮಧ್ಯಪ್ರದೇಶದಲ್ಲಿ ನಡೆದಿರುವ ಘಟನೆ ಸಾಕ್ಷಿಯಾಗಿದೆ. 

Sponsored

ಅದೇನೆಂದರೆ ಮಹಿಳೆಯೊಬ್ಬಳು ಮೈತುಂಬ ಕೊಡುಗೆ ಹಾಕಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಅಪ್ಲೋಡ್ ಮಾಡಿದ್ದಳು. ಇದರ ಮರುದಿನವೇ ಕಳ್ಳರು ನುಗ್ಗಿ ಅವಷ್ಟು ಒಡವೆಗಳನ್ನು ಕದ್ದೊಯ್ದಿರುವ ಅಘಾತಕಾರಿ ಘಟನೆ ನಡೆದಿದೆ.

ಹೌದು, ಮಧ್ಯಪ್ರದೇಶದ ನರವರ್ ಪೊಲೀಸ್ ಠಾಣಾ ವ್ಯಾಪ್ತಿಯ ಮೋಹಾನಿ ಗ್ರಾಮದಲ್ಲಿ ವಾಸಿಸುವ ಪ್ರಸಿದ್ಧ ಮಹಿಳಾ ಯೂಟ್ಯೂಬರ್ ರಚನಾ ಗುರ್ಜರ್ ಅವರ ಮನೆಗೆ ಶನಿವಾರ ಬೆಳಗಿನ ಜಾವ ನುಗ್ಗಿದ ಮುಸುಕುಧಾರಿ ಕಳ್ಳರ ಗುಂಪೊಂದು ಸುಮಾರು 8 ರಿಂದ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದನ್ನು ದೋಚಿ ಪರಾರಿಯಾಗಿದೆ. 

ಪೊಲೀಸ್ ದೂರಿನ ಪ್ರಕಾರ, ಅಲ್ಮೇರಾಗಳ ಬೀಗವನ್ನು ಮುರಿದು 1.91 ಲಕ್ಷ ರೂ. ನಗದು, ಚಿನ್ನದ ಮಂಗಳಸೂತ್ರ, ನಾಲ್ಕು ಚಿನ್ನದ ಉಂಗುರಗಳು, ಬೆಳ್ಳಿಯ ಒಡ್ಯಾಣ ಮತ್ತು ಮನೆಯಲ್ಲಿದ್ದ ಪ್ರಮುಖ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ವಿಚಿತ್ರವೆಂದರೆ, ಕಳ್ಳರು ಹೋಗುವಾಗ ಮನೆಯಲ್ಲಿದ್ದ ಎನರ್ಜಿ ಡ್ರಿಂಕ್‌ನ (ರೆಡ್ ಬುಲ್) ಒಂದು ಇಡೀ ಪೆಟ್ಟಿಗೆಯನ್ನೂ ಸಹ ಹೊತ್ತೊಯ್ದಿದ್ದಾರೆ.

ಅಂದಹಾಗೆ ಶನಿವಾರ ರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ರಚನಾ ಗುರ್ಜರ್ ಮತ್ತು ಅವರ ಪತಿ ಊದಲ್ ಸಿಂಗ್ ಗುರ್ಜರ್ ಸೇರಿದಂತೆ ಕುಟುಂಬದ ಸದಸ್ಯರು ಗಾಢ ನಿದ್ರೆಯಲ್ಲಿದ್ದಾಗ ಕಳ್ಳರು ಕಾಂಪೌಂಡ್‌ನ ತಂತಿ ಬೇಲಿಯನ್ನು ಕತ್ತರಿಸಿ ಒಳನುಗ್ಗಿದ್ದಾರೆ.

ಕಳ್ಳರು ಮೊದಲು ದಂಪತಿ ಮಲಗಿದ್ದ ಕೋಣೆಯ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿದ್ದಾರೆ. ಇದರಿಂದಾಗಿ ಕುಟುಂಬಸ್ಥರು ಒಳಗೆ ಸಿಕ್ಕಿಬಿದ್ದು ಹೊರಬರಲಾರದ ಸ್ಥಿತಿ ನಿರ್ಮಾಣವಾಯಿತು. ಮನೆಯೊಳಗೆ ಸಿಸಿಟಿವಿ ಕ್ಯಾಮೆರಾಗಳಿರುವುದನ್ನು ಅರಿತಿದ್ದ ಮುಸುಕುಧಾರಿ ಕಳ್ಳರು, ತಮ್ಮ ಮುಖಗಳು ಕಾಣದಂತೆ ತಡೆಯಲು ಕ್ಯಾಮರಾವನ್ನು ಕೋಲಿನ ಸಹಾಯದಿಂದ ಮೇಲ್ಮುಖವಾಗಿ ತಿರುಗಿಸಿದ್ದಾರೆ.