ಸೋಮವಾರ, 26 ಅಕ್ಟೋಬರ್ 2026
Trending

ಪತಿಯ ಅಂತ್ಯಕ್ರಿಯೆ ವೇಳೆ ಕೊನೆಯ ಮುತ್ತಿಟ್ಟು ತಾನೂ ಪ್ರಾಣ ಬಿಟ್ಟ ಪತ್ನಿ!!

ಪತಿಯ ಅಗಲಿಕೆಯ ತೀವ್ರ ದುಃಖದಲ್ಲಿದ್ದ ಅವರ ಪತ್ನಿ, ಅಂತ್ಯಕ್ರಿಯೆಯ ವೇಳೆ ಭಾವುಕರಾಗಿ ಕೊನೆಯ ಮುತ್ತು ನೀಡಿ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಅತ್ಯಂತ ಕರುಣಾ ಜನಕ ಘಟನೆ ಕೇರಳದ ಪಾಲಾದಲ್ಲಿ ನಡೆದಿದೆ. 

Sponsored

ಪಾಲಾದ ಪುಥೆನ್‌ಪಲ್ಲಿಕುನ್ನು ವಝಾಯಿಲ್ ನಿವಾಸಿ ಕುರಿಯನ್ ಜೋಸೆಫ್ (ಕುರ್ಯಾಚನ್ – 73) ಅವರ ಪತ್ನಿ ಶಿರ್ಲಿ ಕುರಿಯನ್ (71) ನಿಧನರಾದ ದುರ್ದೈವಿ. ಕೇರಳ ಕಾಂಗ್ರೆಸ್ ಸ್ಟೀರಿಂಗ್ ಸಮಿತಿ ಸದಸ್ಯರೂ ಹಾಗೂ ಪಾಲಾದ ಹಿರಿಯ ಉದ್ಯಮಿಯೂ ಆಗಿದ್ದ ಕುರಿಯನ್ ಜೋಸೆಫ್ ಅವರು ಆಗಸ್ಟ್ 15 ರಂದು ಮಧ್ಯಾಹ್ನ ನಿಧನರಾಗಿದ್ದರು.

ಅವರ ಅಂತ್ಯಕ್ರಿಯೆಯ ಮೊದಲ ಭಾಗದ ಧಾರ್ಮಿಕ ವಿಧಿವಿಧಾನಗಳ ಬಳಿಕ ಪಾರ್ಥಿವ ಶರೀರವನ್ನು ಚರ್ಚ್‌ಗೆ ಕೊಂಡೊಯ್ಯಲು ಸಿದ್ಧತೆ ನಡೆಸುತ್ತಿದ್ದಾಗ, ಪತಿಗೆ ಕೊನೆಯ ಮುತ್ತು ನೀಡಿದ ಶಿರ್ಲಿ ಅವರು ತೀವ್ರ ಆಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಪಾಲಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಚರ್ಚ್‌ನಲ್ಲಿ ಕುರಿಯನ್ ಜೋಸೆಫ್ ಅವರ ಅಂತ್ಯಕ್ರಿಯೆ ನಡೆಯುತ್ತಿದ್ದ ವೇಳೆಯಲ್ಲೇ ಪತ್ನಿ ಶಿರ್ಲಿ ಅವರ ನಿಧನದ ಸುದ್ದಿಯೂ ಬಂದಿತ್ತು.

ನಿನ್ನೆ ಬೆಳಿಗ್ಗೆ ಶಿರ್ಲಿ ಅವರ ಮೃತದೇಹವನ್ನು ಮನೆಗೆ ತರಲಾಗಿದ್ದು, ಧಾರ್ಮಿಕ ವಿಧಿವಿಧಾನಗಳ ನಂತರ ಪಾಲಾದ ಸೇಂಟ್ ಜಾರ್ಜ್ ಲಾಲಂ ಪುತನ್‌ಪಲ್ಲಿ ಚರ್ಚ್‌ನ ಸಮಾಧಿಯಲ್ಲಿ ಇಬ್ಬರ ಶರೀರವನ್ನು ಒಟ್ಟಿಗೆ ದಫನ ಮಾಡಲಾಯಿತು. ಮೃತರು ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.