ಶನಿವಾರ, 24 ಅಕ್ಟೋಬರ್ 2026

ಅಭಿಜಿತ್ ದೀಪ್ಕೆ ವಿದೇಶಿ ವಿದ್ಯಾಭ್ಯಾಸಕ್ಕೆ ಹಣ ಬಂದದ್ದು ಎಲ್ಲಿಂದ? ತನಿಖೆಗೆ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಅಮೆರಿಕದ ಶಿಕ್ಷಣಕ್ಕೆ ಹಣಕಾಸು ಹೇಗೆ ಒದಗಿಸಲಾಯಿತು ಎಂಬ ಕುರಿತು ತನಿಖೆ ನಡೆಸುವಂತೆ ಸೂರತ್ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಅಮಿತ್ ತಿವಾರಿ ಅವರು, ಆಗ್ರಹಿಸಿದ್ದಾರೆ.

ಈ ಸಂಬಂಧ ಅವರು ಭಾರತದ ಚುನಾವಣ ಆಯೋಗ (ECI) ಹಾಗೂ ಆದಾಯ ತೆರಿಗೆ ಅಧಿಕಾರಿಗಳಿಗೆ ಪತ್ರ ಬರೆದು, ಸಿಜೆಪಿ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಪೊಲೀಸ್ ಪ್ರಕರಣಗಳ ಕಾನೂನು ಹೋರಾಟಕ್ಕಾಗಿ ಹಿರಿಯ ವಕೀಲ ಹಾಗೂ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಘೋಷಿಸಿರುವ 1 ಕೋಟಿ ರೂ. ಕಾನೂನು ನೆರವು ನಿಧಿ ಕುರಿತು ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದಾರೆ.

ಅಭಿಜೀತ್ ದೀಪ್ಕೆ ಅವರ ತಂದೆ ಭಗವಾನರಾವ್ ದೀಪ್ಕೆ ಅವರು ಮಹಾರಾಷ್ಟ್ರ ಸರ್ಕಾರದ ನಿವೃತ್ತ ನೌಕರರಾಗಿದ್ದಾರೆ. ಅವರ ಆದಾಯ ಹಾಗೂ ಆರ್ಥಿಕ ಸ್ಥಿತಿಗತಿಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಅವರ ಮಗನ ವಿದೇಶಿ ಶಿಕ್ಷಣಕ್ಕೆ ತಗುಲಿದ ಭಾರಿ ಪ್ರಮಾಣದ ವೆಚ್ಚಕ್ಕೆ ಹಣದ ಮೂಲ ಯಾವುದು ಎಂಬುದನ್ನು ತನಿಖೆ ಮಾಡಬೇಕು ಎಂದು ತಿವಾರಿ ಒತ್ತಾಯಿಸಿದ್ದಾರೆ.

ಇದರೊಂದಿಗೆ ‘ಕಾಕ್ರೋಚ್ ಜನತಾ ಪಾರ್ಟಿಯ’ ಕಾನೂನುಬದ್ಧ ಸ್ಥಾನಮಾನದ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ. ರಾಜಕೀಯ ಪಕ್ಷದ ಹೆಸರಿನಲ್ಲಿ ಸಾರ್ವಜನಿಕವಾಗಿ ಕಾರ್ಯಾಚರಿಸುತ್ತಿರುವ ಸಿಜೆಪಿ ಸಂಸ್ಥೆಯು ನಿಧಿ ಸಂಗ್ರಹಿಸಲು ಅಥವಾ ಹಣ ಸ್ವೀಕರಿಸಲು ಕಾನೂನುಬದ್ಧವಾಗಿ ಅರ್ಹವಾಗಿದೆಯೇ ಎಂಬುದನ್ನು ಚುನಾವಣಾ ಆಯೋಗವು ಸ್ಪಷ್ಟಪಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.