ಪುತ್ತೂರು ಜು.30: ಇಲ್ಲಿನ ವಿವೇಕಾನಂದ ವಿದ್ಯಾವರ್ದಕ ಸಂಘದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವೇಕಾನಂದ ಕಲಾ, ವಾಣಿಜ್ಯ ಮತ್ತು ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ಗ್ರಂಥಾಲಯ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಜಯರಾಮ ಪಿ. ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಕಛೇರಿ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಎಸ್. ಸತ್ಯನಾರಾಯಣ ಜುಲೈ 31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
Sponsoredಜಯರಾಮ ಪಿ. ಅವರು ಪಡ್ನೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ, ಸರಕಾರಿ ಕಿರಿಯ ಪ್ರೌಢ ಶಾಲೆ ಕೊಂಬೆಟ್ಟಿನಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಪಡೆದು, ೧೯೯೪ರಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಕಾವಲುಗಾರನಾಗಿ ವೃತ್ತಿ ಅರಂಭಿಸಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಬಳಿಕ ಸಂಸ್ಥೆಯ ಗ್ರಂಥಾಲಯದಲ್ಲಿ ನಾಲ್ಕನೇ ದರ್ಜೆಯ ನೌಕರನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಎಸ್.ಸತ್ಯನಾರಾಯಣ ಅವರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನಲ್ಲಿ ತಮ್ಮ ವಿದ್ಯಾಭ್ಯಾಸ ಪೂರೈಸಿ, ೧೯೮೯ರಲ್ಲಿ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ತಮ್ಮ ವೃತ್ತಿ ಆರಂಭಿಸಿದರು. ನಂತರ ೧೯೯೦ರಲ್ಲಿ ಪುತ್ತೂರು ವಿವೇಕಾನಂದ ಪದವಿ ಕಾಲೇಜಿಗೆ ಸೇರ್ಪಡೆಹೊಂದಿ ೧೧ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಬಳಿಕ ವಿವೇಕಾನಂದ ಪದವಿ ಪೂರ್ವ ಕಾಲೇಜಿಗೆ ವರ್ಗಾವಣೆಗೊಂಡು, ಒಟ್ಟು ೩೬ ವರ್ಷ ಸುದೀರ್ಘ ಕಾಲ ಕಾರ್ಯನಿರ್ವಹಿಸಿರುತ್ತಾರೆ. ಸಂಸ್ಥೆಗೆ ಅತ್ಯುತ್ತಮ ಸೇವೆಯನ್ನು ಸಲ್ಲಿಸಿರುವ ಈ ಈರ್ವರು ನಾಳೆ ನಿವೃತ್ತಿ ಹೊಂದಲಿದ್ದಾರೆ. ಇವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂಬುದು ಸಂಸ್ಥೆಯ ಹಾರೈಕೆಯಾಗಿದೆ.




