ಶನಿವಾರ, 24 ಅಕ್ಟೋಬರ್ 2026

ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿಗೆ ವಿಜಯ್ ಮಲ್ಯ ಕೆಂಡಾಮಂಡಲ!!

ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರ ಮನೆಗಳ ಮೇಲಿನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿರುವ ವಿಚಾರ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದೀಗ ಸಚಿವ ಸತೀಶ್ ಜಾರಕಿಹೊಳಿ ಮೇಲಿನ ED ದಾಳಿಗೆ ಸಂಬಂಧಿಸಿದಂತೆ, ವಿದೇಶದಲ್ಲಿರುವ ಉದ್ಯಮಿ ವಿಜಯ್ ಮಲ್ಯ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾರಿ ನಿರ್ದೇಶನಾಲಯದ ಕಾರ್ಯವೈಖರಿಯನ್ನು ಕಡುಭ್ರಷ್ಟ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸಿರುವ ಅವರು, ಯಾವುದೇ ಸೂಕ್ತ ಚಾರ್ಜ್‌ಶೀಟ್ ಸಲ್ಲಿಸದೆ ಹಾಗೂ ನ್ಯಾಯಯುತ ವಿಚಾರಣೆ ನಡೆಸದೆ, ಕೇವಲ ಸಾರ್ವಜನಿಕವಾಗಿ ವ್ಯಕ್ತಿಗಳ ಚಾರಿತ್ರ್ಯ ವಧೆ ಮಾಡುವುದರಲ್ಲಿ ಇದು ಹೆಮ್ಮೆ ಪಟ್ಟುಕೊಳ್ಳುತ್ತಿದೆ. ವಿಶ್ವದ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲೂ ಇಂತಹ ಜಾರಿ ಸಂಸ್ಥೆಗಳ ನಡವಳಿಕೆಯನ್ನು ಕಾಣಲು ಸಾಧ್ಯವಿಲ್ಲ. ನಾಗರಿಕರು ಈ ಬಗ್ಗೆ ಯೋಚಿಸಬೇಕು ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ ತಮ್ಮ ಮೇಲಿನ ಆರೋಪಗಳು ಹಾಗೂ ಸಾರ್ವಜನಿಕ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಮಲ್ಯ, ನನ್ನನ್ನು ಪ್ರೀತಿಸಿ, ದ್ವೇಷಿಸಿ, ನಿಂದಿಸಿ ಅಥವಾ ನಿರ್ಲಕ್ಷಿಸಿ ಆದರೆ ನಾನು ಎಂದಿಗೂ ಬದಲಾಗುವುದಿಲ್ಲ. ದೇವರು ನನಗೆ ಸಾಟಿಯಿಲ್ಲದ ಧೈರ್ಯ ಮತ್ತು ಶಕ್ತಿಯನ್ನು ನೀಡಿದ್ದಾನೆ. ಕೊನೆಯಲ್ಲಿ ಸತ್ಯವೇ ಜಯಗಳಿಸಲಿದೆ ಎಂಬ ನಂಬಿಕೆ ನನಗಿದೆ. ಭಾರತದಲ್ಲಿರುವ ನಾನು ಪೂಜಿಸುವ ಪವಿತ್ರ ದೇವಾಲಯಗಳಿಗೆ ಭೇಟಿ ನೀಡಲಾಗದಿರುವುದು ನನಗೆ ಅತ್ಯಂತ ಬೇಸರ ತಂದಿದೆ. ನಾನು ದೇವಾಲಯ ಭೇಟಿಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ಆದಾಗ್ಯೂ, ನನ್ನ ಧಾರ್ಮಿಕ ಚೌಕಟ್ಟು ಮತ್ತು ನಿಷ್ಠೆಯನ್ನು ನಾನು ಸದಾ ಕಾಪಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.