ಶನಿವಾರ, 24 ಅಕ್ಟೋಬರ್ 2026

ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ 21ನೇ ಶ್ರೀ ವರಮಹಾಲಕ್ಷ್ಮೀ ವೃತಾಚರಣೆ

ಬಂಟ್ವಾಳ: ಮನುಷ್ಯನ ನಿಜವಾದ ಶಾಶ್ವತ ಸುಖವು ಹೊರಗಿನ ವಸ್ತುಗಳಲ್ಲಿ ಅಲ್ಲ, ಆತನ ಅಂತರಂಗದಲ್ಲಿಯೇ ಅಡಗಿದೆ. ಮನಸ್ಸಿನಲ್ಲಿ ಯಾವುದೇ ಕಲ್ಮಶವಿಲ್ಲದೆ ಭಕ್ತಿ ಹಾಗೂ ಸಾತ್ವಿಕ ಚಿಂತನೆ ಇದ್ದಾಗ ದೇವರ ಅನುಭವ ಪಡೆಯಲು ಸಾಧ್ಯ ಎಂದು ಮಂಗಳೂರಿನ ಶ್ರೀ ಆದಿಚುಂಚನಗಿರಿ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.

ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ ವತಿಯಿಂದ ಸೇವಾಂಜಲಿ ಸಭಾಗೃಹದಲ್ಲಿ ಆಯೋಜಿಸಿದ್ದ 21ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಲಕ್ಷ್ಮೀ ದೇವಿಯು ಶಕ್ತಿ ಮತ್ತು ಸಮೃದ್ಧಿಯ ಪ್ರತೀಕವಾಗಿದ್ದು, ನಮ್ಮ ಕರ್ಮ, ಕರ್ತವ್ಯ ಹಾಗೂ ಚಿಂತನೆಗಳಲ್ಲಿ ಲಕ್ಷ್ಮೀ ತತ್ವ ನೆಲೆಸಿರುತ್ತದೆ. ಸಮಾಜದ ಎಲ್ಲರೂ ಒಗ್ಗೂಡಿ ಆಚರಿಸುವ ಸಾಮೂಹಿಕ ಪೂಜೆಗಳು ಧಾರ್ಮಿಕ ಹಾಗೂ ಸಾಮಾಜಿಕವಾಗಿ ವಿಶೇಷ ಮಹತ್ವ ಹೊಂದಿವೆ ಎಂದು ಸ್ವಾಮೀಜಿ ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಪ್ರತೀಕ್ಷಾ ರೈ ಜಿ. ಮಾತನಾಡಿ, ಸಮಾಜದ ಬಡವರು ಹಾಗೂ ಅಗತ್ಯವಿರುವವರಿಗೆ ನೆರವಾಗುವ ಮನೋಭಾವ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಧರ್ಮ, ಸಂಸ್ಕಾರ ಮತ್ತು ಮೌಲ್ಯಗಳನ್ನು ಕಲಿಸುವುದು, ಹಿರಿಯರನ್ನು ಗೌರವಿಸುವುದು ಸೇರಿದಂತೆ ಉತ್ತಮ ಸಂಕಲ್ಪಗಳನ್ನು ಈ ಪವಿತ್ರ ದಿನದಂದು ಕೈಗೊಳ್ಳಬೇಕು ಎಂದರು.

ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ ಕಾರ್ಯದರ್ಶಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದಲ್ಲಿರುವ ಮೇಲು-ಕೀಳು, ಸ್ಪೃಶ್ಯ-ಅಸ್ಪೃಶ್ಯತೆ ಹಾಗೂ ತಾರತಮ್ಯ ಭಾವನೆಗಳನ್ನು ದೂರಗೊಳಿಸಿ ಎಲ್ಲರೂ ಒಂದೇ ಎಂಬ ಸಮಾನತೆಯ ಮನೋಭಾವ ಬೆಳೆಸುವಲ್ಲಿ ಇಂತಹ ಸಾಮೂಹಿಕ ಆಚರಣೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಇದರೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಸೇವಾ ಕಾರ್ಯಕ್ಕೂ ಆದ್ಯತೆ ನೀಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮೂವರು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಸಾಂಕೇತಿಕವಾಗಿ ಆರ್ಥಿಕ ನೆರವು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ರವೀಂದ್ರ ಕಂಬಳಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕರಾದ ಸುಮಿತ್ರಾ ಸುರೇಶ್ ಕುಂಪಣಮಜಲು, ನಳಿನಿ ವಿಠಲ ಆಳ್ವ ಹಾಗೂ ಕೇಶವ ದೋಟ ಮತ್ತು ಕುಸುಮಾವತಿ ದಂಪತಿ ಭಾಗವಹಿಸಿದ್ದರು.

ಶಿಕ್ಷಕಿ ಕವಿತಾ ದೇವದಾಸ್ ಕಾರ್ಯಕ್ರಮ ನಿರೂಪಿಸಿದರು. ಪೊಳಲಿ ಸುಬ್ರಹ್ಮಣ್ಯ ತಂತ್ರಿ ಅವರ ನೇತೃತ್ವದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿತು.