ಸೋಮವಾರ, 26 ಅಕ್ಟೋಬರ್ 2026
Trending

ಉಜಿರೆ: ಮನೋಜ್‌ ಕುಂಜರ್ಪ ಗಡಿಪಾರು ಅರ್ಜಿ ವಜಾಗೊಳಿಸಿ ಪುತ್ತೂರು ಎ.ಸಿ.ಆದೇಶ

ಬೆಳ್ತಂಗಡಿ: ಉಜಿರೆಯ ಮನೋಜ್‌ ಕುಂಜರ್ಪ ಎಂಬಾತನನ್ನು ಗಡಿಪಾರು ಮಾಡುವಂತೆ ಬೆಳ್ತಂಗಡಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಪುತ್ತೂರು ಸಹಾಯಕ ಕಮಿಷನರ್‌ ನ್ಯಾಯಾಲಯವು ತಿರಸ್ಕರಿಸಿದೆ. ಮನೋಜ್‌ ಕುಂಜರ್ಪ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ 10 ಪ್ರಕರಣಗಳು ದಾಖಲಾಗಿದ್ದು, ಆತನ ವರ್ತನೆಯಿಂದ ಸಾಮಾಜಿಕ ಅಶಾಂತಿ ಹಾಗೂ ಗಲಭೆಗಳಿಗೆ ಕಾರಣವಾಗಲಿದೆ. ಆದ್ದರಿಂದ ಆತನನ್ನು ಬೆಳ್ತಂಗಡಿ ತಾಲೂಕಿನಿಂದ ಗಡಿಪಾರು ಮಾಡುವಂತೆ ಬೆಳ್ತಂಗಡಿ ಪೊಲೀಸ್‌ ನಿರೀಕ್ಷಕರು ಪುತ್ತೂರು ಸಹಾಯಕ ಕಮಿಷನರ್‌ ಅವರಿಗೆ ಮನವಿ ಸಲ್ಲಿಸಿದ್ದರು.

Sponsored

ಪ್ರಕರಣದ ವಿಚಾರಣೆ ಮಾಡಿದ ಆರೋಪಿ ಪರ ವಕೀಲರು ವಾದ ಮಂಡಿಸಿ, ಪೊಲೀಸರ ಆರೋಪಗಳನ್ನು ತಳ್ಳಿಹಾಕಿದ್ದು, ಹತ್ತರದಲ್ಲಿ ಐದು ಪ್ರಕರಣಗಳು ಈಗಾಗಲೇ ಖುಲಾಸೆಯಾಗಿದ್ದು, ಐದು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಇತ್ತೀಚಿನ ಮೂರು ಪ್ರಕರಣಗಳು ಗುರುತರವಾದ ಆರೋಪಗಳದ್ದಲ್ಲ ಎಂದು ವಾದ ಮಂಡಿಸಿದ್ದರು. ವಾದ ಆಲಿಸಿದ ಪುತ್ತೂರು ಸಹಾಯಕ ಕಮಿಷನರ್‌ ನ್ಯಾಯಾಲಯವು ಗಡಿಪಾರು ಕೋರಿಕೆಯನ್ನು ತಿರಸ್ಕರಿಸಿದೆ.

ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಕೃತ್ಯಗಳಲ್ಲಿ ಭಾಗಿಯಾಗದೇ, ಸಮಾಜದಲ್ಲಿ ಶಾಂತಿಯನ್ನು ಕದಡುವಂತಹ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿ, ಆರೋಪಿಯ ಬಗ್ಗೆ ಯಾವುದೇ ತರಹದ ದೂರುಗಳು ಬಂದಲ್ಲಿ ಮತ್ತೆ ಪ್ರಸ್ತಾವನೆಯನ್ನು ಸಲ್ಲಿಸಲು ಅವಕಾಶ ಕಾಯ್ದಿರಿಸಿ, ಸದರಿ ಗಡಿಪಾರು ಪ್ರಸ್ತಾವನೆಯನ್ನು ಈ ಹಂತದಲ್ಲಿ ತಿರಸ್ಕರಿಸುವುದಾಗಿ ಸೆ.4 ರಂದು ಪುತ್ತೂರು ಸಹಾಯಕ ಕಮಿಷನರ್‌ ಸ್ಟೆಲ್ಲಾ ವರ್ಗೀಸ್‌ ಆದೇಶ ನೀಡಿದ್ದಾರೆ.