ಕಾನೂನನ್ನು ದುರ್ಬಳಕೆ ಮಾಡಿಕೊಂಡು ಅಮಾಯಕ ಆಟೋ ಚಾಲಕನೋರ್ವನನ್ನು ಕೆಂಪು ಕಲ್ಲು ಕಳ್ಳತನದ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರ ಈ ಕೃತ್ಯಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದ್ದು ಚಾಲಕನನ್ನು ಸಂಪೂರ್ಣವಾಗಿ ದೋಷ ಮುಕ್ತನನ್ನಾಗಿಸಿ ತೀರ್ಪು ನೀಡಿದೆ.
ಕುಂದಾಪುರದ ಆಲೂರು ಗ್ರಾಮದ ಆಟೋ ಚಾಲಕ ಶೀನ ಯಾನೆ ಶ್ರೀನಿವಾಸ ಪೂಜಾರಿ ಎಂಬವರೇ ಪೊಲೀಸರ ಅನ್ಯಾಯಕ್ಕೆ ಬಲಿಯಾಗಿ, ಇದೀಗ ನ್ಯಾಯಾಲಯದಿಂದ ನ್ಯಾಯ ಪಡೆದುಕೊಂಡ ವ್ಯಕ್ತಿ.
ಏನಿದು ಘಟನೆ?
ಉಡುಪಿ ಜಿಲ್ಲೆಯ ಆಲೂರು ಗ್ರಾಮದ ನಿವಾಸಿ ಶ್ರೀನಿವಾಸ ಪೂಜಾರಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ಅದೇ ಗ್ರಾಮದ ಉದಯ ಶೆಟ್ಟಿ ಎಂಬಾತ ಶ್ರೀನಿವಾಸ ಅವರ ಆಟೋವನ್ನು ಬಾಡಿಗೆಗೆ ಗೊತ್ತುಮಾಡಿಕೊಂಡು ಗಂಗೊಳ್ಳಿ ಪೊಲೀಸ್ ಠಾಣೆಗೆ ತೆರಳಿದ್ದ. ಆಟೋ ಹೊರಗೆ ನಿಲ್ಲಿಸಿ ಉದಯ ಶೆಟ್ಟಿ ಠಾಣೆಯೊಳಗೆ ಹೋದ ಬಳಿಕ, ಪೊಲೀಸರು ಹೊರಗಿದ್ದ ಶ್ರೀನಿವಾಸ ಪೂಜಾರಿಯವರನ್ನು ಒಳಗೆ ಕರೆದು “ಉದಯ ಶೆಟ್ಟಿ ಪರಿಚಯವಿದ್ದಾರಾ?” ಎಂದು ವಿಚಾರಿಸಿದ್ದಾರೆ.
‘ಪರಿಚಯಸ್ಥರು’ ಎಂದಿದ್ದನ್ನೇ ದುರುಪಯೋಗಪಡಿಸಿಕೊಂಡ ಪೊಲೀಸರು, “ನಿಮಗೇನೂ ತೊಂದರೆಯಾಗಲ್ಲ, ತನಿಖೆಗೆ ಸಹಕರಿಸಿ” ಎಂದು ನಂಬಿಸಿ ಓದಲು-ಬರೆಯಲು ಬಾರದ ಶ್ರೀನಿವಾಸ ಅವರಿಂದ ಕಳವು ಪ್ರಕರಣದ ದಾಖಲೆಗಳಿಗೆ ಸಹಿ ಹಾಗೂ ಆಧಾರ್ ಕಾರ್ಡ್ ಪ್ರತಿಯನ್ನು ಪಡೆದುಕೊಂಡಿದ್ದಾರೆ. ಘಟನೆ ನಡೆದ ಎರಡು ತಿಂಗಳ ಬಳಿಕ ಪೊಲೀಸರು ಮನೆಗೆ ಸಮನ್ಸ್ ತಂದುಕೊಟ್ಟಾಗ ಅದರಲ್ಲಿ ಶ್ರೀನಿವಾಸ್ ಸಮನ್ಸ್ನಲ್ಲಿ ಉದಯ ಶೆಟ್ಟಿ ಜೊತೆ ಸೇರಿ ಸರ್ಕಾರಿ ಜಮೀನಿನಲ್ಲಿ ಕಲ್ಲು ಕ್ವಾರೆ ಮಾಡಿ ಕೆಂಪು ಕಲ್ಲು ಕಳ್ಳತನ ಮಾಡಿರುವ ಗಂಭೀರ ಆರೋಪ ಹೊರಿಸಲಾಗಿತ್ತು.
ಅದೂ ಅಲ್ಲದೆ, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2) ರಡಿಯಲ್ಲಿ ಶ್ರೀನಿವಾಸ ಅವರನ್ನು ಎರಡನೇ ಆರೋಪಿಯನ್ನಾಗಿ (ಎ-2) ಮಾಡಲಾಗಿತ್ತು.ಈ ಬಗ್ಗೆ ಆಟೋ ಚಾಲಕ ಗಂಗೊಳ್ಳಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಾಗ, “ಇದೊಂದು ಸಣ್ಣ ಕೇಸು, ಕೋರ್ಟ್ ಮುಂದೆ ತಪ್ಪು ಒಪ್ಪಿಕೊಳ್ಳಿ. ದಂಡದ ಹಣವನ್ನು ಮೊದಲ ಆರೋಪಿ ಉದಯ ಶೆಟ್ಟಿಯೇ ಕಟ್ಟುತ್ತಾರೆ, ಅವರೇ ಬೇಲ್ ಕೊಡಿಸುತ್ತಾರೆ” ಎಂದು ಪೊಲೀಸರು ಉಡಾಫೆಯ ಉತ್ತರ ನೀಡಿದ್ದರು.
ಪೊಲೀಸರ ಮೋಸದಿಂದ ಕಂಗಾಲಾಗಿದ್ದ ಶ್ರೀನಿವಾಸ ಪೂಜಾರಿ ಅವರು ಕಾನೂನು ವಿದ್ಯಾರ್ಥಿಯೊಬ್ಬರ ಸಲಹೆಯಂತೆ ‘ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ’ವನ್ನು ಸಂಪರ್ಕಿಸಿದರು. ಸಂಸ್ಥೆಯ ವಕೀಲ ಎನ್. ವಿವೇಕಾನಂದ ಅವರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಕಾನೂನು ಸಮರ ಆರಂಭಿಸಿದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠವು, “ಆಟೋ ಚಾಲಕನನ್ನು ಯಾವ ಆಧಾರದ ಮೇಲೆ ಆರೋಪಿಯನ್ನಾಗಿ ಮಾಡಿದ್ದೀರಿ?” ಎಂದು ಪ್ರಶ್ನಿಸಿ ಗಂಗೊಳ್ಳಿ ಪೊಲೀಸರಿಗೆ ಖಡಕ್ ನೋಟಿಸ್ ಜಾರಿ ಮಾಡಿತ್ತು. ಕೋರ್ಟ್ ನೋಟಿಸ್ಗೆ ಪೊಲೀಸರಿಂದ ಯಾವುದೇ ಸೂಕ್ತ ಉತ್ತರ ಬಾರದ ಹಿನ್ನೆಲೆಯಲ್ಲಿ, ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠವು ಶ್ರೀನಿವಾಸ ಪೂಜಾರಿ ಅವರ ಮೇಲಿದ್ದ ಪ್ರಕರಣವನ್ನು ರದ್ದುಗೊಳಿಸಿ, ಅವರನ್ನು ಸಂಪೂರ್ಣ ದೋಷಮುಕ್ತಗೊಳಿಸಿದೆ.
ಇದೀಗ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದು, ಇಲ್ಲಸಲ್ಲದ ಕಳ್ಳತನದ ಆರೋಪ ಹೊರಿಸಿದ ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯ ವಿರುದ್ಧ ಶೀಘ್ರದಲ್ಲೇ ಮಾನನಷ್ಟ ಮೊಕದ್ದಮೆ ಹೂಡಲು ದೋಷಮುಕ್ತರಾದ ಶ್ರೀನಿವಾಸ ಪೂಜಾರಿ ತೀರ್ಮಾನಿಸಿದ್ದಾರೆ.



