ಉಳ್ಳಾಲ, ಸೆ.08: ಐದು ತಿಂಗಳ ಹಿಂದೆ ಸೌದಿ ಅರೇಬಿಯಾಕ್ಕೆ ಕೆಲಸಕ್ಕೆಂದು ತೆರಳಿದ್ದ ಕುತ್ತಾರು ನಿವಾಸಿ ಅವಿವಾಹಿತ ಯುವಕನೊಬ್ಬ ಮಂಗಳವಾರ ಬೆಳಗ್ಗೆ ಸೌದಿ ಅರೇಬಿಯಾದಲ್ಲಿ ತಾನು ತಂಗಿದ್ದ ಕೋಣೆಯಲ್ಲಿ ದಿಢೀರಣೆ ಸಾವಿಗೀಡಾಗಿದ್ದು, ಹೃದಯಾಘಾತದಿಂದ ಸಾವಿಗೀಡಾಗಿರುವುದು ವರದಿಯಾಗಿದೆ.
ಕುತ್ತಾರುವಿನ ಕೊರಗಜ್ಜನ ಆದಿ ಕ್ಷೇತ್ರದ ಬಳಿಯ ನಿವಾಸಿ ಶರತ್ ಕುಮಾರ್ (35) ಮೃತಪಟ್ಟ ಯುವಕ. ಐದು ತಿಂಗಳ ಹಿಂದೆ ಸೌದಿ ಅರೇಬಿಯಾಕ್ಕೆ ಹೋಗಿದ್ದ ಶರತ್ ಕನ್ಸ್ಟ್ರಕ್ಷನ್ ಕಂಪನಿಯಲ್ಲಿ ಸುಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ತಮಿಳುನಾಡು ಮೂಲದ ಸಹೋದ್ಯೋಗಿ ಮಿತ್ರನ ಜೊತೆಯಲ್ಲಿ ತಾನು ಕೆಲಸ ನಿರ್ವಹಿಸುತ್ತಿದ್ದ ಕಂಪನಿಯ ರೂಮಿನಲ್ಲಿ ಉಳಿದುಕೊಂಡಿದ್ದರು. ರಾತ್ರಿ 11 ಗಂಟೆಗೆ ಸಹೋದ್ಯೋಗಿ ರೂಮಿಗೆ ಬಂದಾಗ ಶರತ್ ಮಲಗಿರುವುದಾಗಿ ವರದಿಯಾಗಿದೆ.
ಮಂಗಳವಾರ ಬೆಳಗ್ಗೆ ಶರತ್ ಬೇಗನೆ ಕೆಲಸಕ್ಕೆ ತೆರಳಲೆಂದು ಅಲರಾಂ ಇಟ್ಟಿದ್ದು, ಅಲರಾಂ ಸದ್ದು ಮಾಡಿದರೂ ಶರತ್ ಎದ್ದೇಳದೆ ಇದ್ದಾಗ ರೂಮ್ಮೇಟ್ ಪರಿಶೀಲನೆ ಮಾಡಿದ್ದು, ಈ ವೇಳೆ ಶರತ್ ಸಾವಿಗೀಡಾಗಿರುವುದು ಬೆಳಕಿಗೆ ಬಂದಿದೆ. ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಶರತ್ ಸೋಮವಾರ ತಡ ರಾತ್ರಿವರೆಗೆ ಅಣ್ಣನ ಜೊತೆ ಫೋನ್ನಲ್ಲಿ ಸಂಭಾಷಣೆ ನಡೆಸಿದ್ದರಂತೆ. ಶರತ್ ಅವರ ಅಕಾಲಿಕ ಸಾವಿನ ಸುದ್ದಿಯಿಂದ ಕುಟುಂಬದವರು ಶೋಕತಪ್ತರಾಗಿದ್ದಾರೆ.


