ಮಂಗಳೂರು: ಕಳೆದ ಎರಡು ದಶಕಗಳಿಂದ ತುಳು ಕನ್ನಡ ರಂಗಭೂಮಿಯಲ್ಲಿ ರಂಗನಾಯಕಿಯಾಗಿ ಮೆರೆದು ತನ್ನ ವಿಶೇಷ ಹಾವಭಾವ, ವಾಕ್ಚಾತುರ್ಯ, ಉಚ್ಚಾರಣೆ, ಪಾತ್ರಕ್ಕೆ ತಕ್ಕಂತೆ ಒಪ್ಪುವ ವಿಶೇಷ ವರ್ಣಾಲಂಕಾರ ಸಮಯ-ಸನ್ನಿವೇಶ-ಸಂದರ್ಭಕ್ಕೆ ತಕ್ಕಂತೆ ಮಾಡುವ ಸಂಭಾಷಣೆ, ಅದ್ಭುತ ನೃತ್ಯಾಭಿನಯ, ನೃತ್ಯ ಅಭಿನಯ ಮೂಲಕ ಕಲಾಭಿಮಾನಿಗಳು ರೋಮಾಂಚನಗೊಳ್ಳುವ ಸನ್ನಿವೇಶದಲ್ಲಿ ತನ್ನದೇ ಛಾಪನ್ನು ಮೂಡಿಸಿ ತುಳು ರಂಗಭೂಮಿಯಲ್ಲಿ ಅಗ್ರಗಣ್ಯರಣಿಸಿದ ಕಲಾವಿದೆ ಜ್ಯೋತಿ ಕುಲಾಲ್ ಪುತ್ತೂರು. ಇವರು ಅಭಿನಯಿಸುವ ನಾಟಕ-ಸಿನಿಮಾ ನಿಜಕ್ಕೂ ಅವಿಸ್ಮರಣೀಯ ಅನುಭವವನ್ನು ನೀಡುತ್ತದೆ.
Sponsoredದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪದವು ಬಲ್ನಾಡು ಉಜಿರೆ ಪಾದೆಯ ದಿ| ಕೃಷ್ಣಪ್ಪ ಕುಲಾಲ್ -ರೂಪ ಪುತ್ರಿಯಾಗಿ ಜನಿಸಿದ ಇವರ ವಿದ್ಯಾಭ್ಯಾಸ ಹೈಸ್ಕೂಲುಗೆ ಮೊಟಕಾದಾಗ ಕಲಾ ಜೀವನ ಮೊಗ್ಗೊಡೆದು ಅವರಿಗಾಗಿ ಕಾದು ಕೂತಿತ್ತು.
ಕಲೆ ಯಾರಿಗೆ ಒಲಿಯುತ್ತದೋ? ಅವರಿಗೆ ಆ ಕಲಾ ಜೀವನ ಒಗ್ಗುತ್ತದೆ. ಮತ್ತೆ ಕೆಲವರು ಕಲಾ ಜೀವನಕ್ಕೆ ಒಗ್ಗಿಕೊಳ್ಳುತ್ತಾರೆ. ಜ್ಯೋತಿ ಕುಲಾಲ್ ಈ ಎರಡೂ ವರ್ಗಕ್ಕೂ ಏಕಕಾಲದಲ್ಲಿ ಸಲ್ಲುವವರು: ಅದೇ ಜ್ಯೋತಿ ಅವರ ವಿಶೇಷತೆ!

ಪ್ರಥಮವಾಗಿ ‘ಅತ್ತಿಗೆ’ ಎಂಬ ನಾಟಕದ ಪಾತ್ರ ಸಿಕ್ಕಿತು. ರಂಗಭೂಮಿಗೆ ಪಾದಾರ್ಪಣೆ ನಂತರ ಇವರ ಕಲಾ ಜೀವನದ ಬದುಕು ಮಹತ್ವದ ತಿರುವು ನೀಡಿತ್ತು. ಇವರ ಸುಲಲಿತ ಅಭಿನಯ ಚಾತುರ್ಯ ತಂಡ ನಾಟಕ ನಿರ್ದೇಶಕರು ಹಲವಾರು ನಾಟಕ, ಚಲನಚಿತ್ರಗಳಲ್ಲಿ ಅವಕಾಶ ನೀಡಿದರು. ಒಂದು ಪಾತ್ರದ ರಸವತ್ತಿಕೆಗೆ, ತನ್ನ ಅಭಿನಯ ಪಾತ್ರಕ್ಕೆ ಇಲ್ಲಿ ಹೇಗೆ ಎಷ್ಟು ಉಪ್ಪು ಖಾರ ಹುಳಿ ಸೇರಿಸಬೇಕೆಂಬ ಕಲೆ ದೈವದತ್ತವಾಗಿಯೇ ಬಂದಿತ್ತು. ಹಾಗಾಗಿ ಸುಲಲಿತವಾಗಿ ತನ್ನದೇ ವಿಶಿಷ್ಟ, ವಯ್ಯಾರ, ಲಜ್ಞೆತನ, ಮಾತಿನ ಮೋಡಿಯಿಂದ ಅವರು ಕಲಾ ಪ್ರೇಕ್ಷಕರನ್ನು ಹುಚ್ಚೆಬ್ಬಿಸುವಂತೆ ಅಭಿನಯಿಸಲು ಪ್ರಾರಂಭಿಸಿದರು. ಸಮಯ ಸಂದರ್ಭಕ್ಕೆ ತಕ್ಕಂತೆ ನಿರ್ವಹಿಸುವ ಚಾಣಾಕ್ಷತನದಿಂದ ಅಭಿನಯಿಸಿದ ನಾಟಕಗಳ ಸಂಖ್ಯೆ ಎರಡಂಕಿಯನ್ನು ಮೀರಿ ನೂರಕ್ಕೂ ಹೆಚ್ಚು ಪ್ರದರ್ಶನಗೊಂಡಿತ್ತು.
*ಅಭಿನಯಿಸಿದ ನಾಟಕಗಳು-55*
1. ಅತ್ತಿಗೆ
2. ತಂಗಡಿ ದಾಳಿ
3. ಕಾಕಾಜಿ ಭತ್ಂಡ್
4. ಈ ನರಕ ದಾಯೆ
5. ಬಾರಿ ಶೋಕತ್ಂಡ
6. ಉಡು ಉಲ್ಲೆರ್
7. ಕಾವೇರಿ
8. ಸೇವಂತಿಗೆ ಮದಿಮೆ
9. ಸಂಸಾರದು ಒಂದು ಆಪಸ್ಮರ
10. ಕರಿಯೇ ಕಟ್ಟಿನ ಕರಿಮಣಿ…ಇತ್ಯಾದಿ.
ಹೀಗೆ ಹಲವು ನಾಟಕಗಳಲ್ಲಿ ಅಭಿನಯಿಸಿದ ಬಳಿಕ ತಾನಾಗಿಯೇ ತುಳು ಜನರು ‘ತುಳು ಅಭಿನಯ ಶಾರದೆ’ ಎಂಬಂತೆ ಇವರಿಗೆ ಶಹಬ್ಬಾಸ್ ಗಿರಿ ನೀಡಿದರು. ತದನಂತರ ಇವರು ಹಿಂತಿರುಗಿ ನೋಡಲೇ ಇಲ್ಲ. ಮುಂದೆ ಧಾರಾವಾಹಿ ಕರೆದಿತ್ತು. ಇವರ ನಟನೆ ರಂಗಭೂಮಿಗೆ ಮಾತ್ರವಲ್ಲ, ಸೀರಿಯಲ್ ನಟನೆಗೂ ಸೈ ಅನ್ನಿಸಿದಾಗ ಪ್ರಥಮವಾಗಿ ‘ಶಿರಡಿ ಸಾಯಿಬಾಬಾ’ ದಲ್ಲಿ ನಟಿಸಿದರು. ಇವರ ಅಭಿನಯ ಇವರನ್ನು ಮುಂದಿನ ಹಂತಕ್ಕೆ ತೇರ್ಗಡೆಗೊಳಿಸಿತ್ತು.
ಮುಂದೆ ದೇವರೆನ ದಯೆ, ಕನ್ ಕಟ್, ಕಟೀಲು ಕ್ಷೇತ್ರ ಚರಿತ್ರೆನಲ್ಲಿ ಸೀರಿಯಲ್ ಪಾತ್ರಗಳಲ್ಲಿ ನಟಿಸಿದರು. ದೊಡ್ಡ ಪ್ರಮಾಣದಲ್ಲಿ ಹೆಸರು ಬಂದಿತ್ತು. ಜ್ಯೋತಿ ಕುಲಾಲ್ ತುಳು ರಂಗಭೂಮಿ ಮತ್ತು ಕರಾವಳಿಗೆ ಚಿರ ಪರಿಚಿತರಾದರು.
*ಸಿನಿಮಾದತ್ತ ಜಿಗಿತ*
ಅಲ್ಲಿಂದ ಮುಂದಕ್ಕೆ ಇನ್ನೊಂದು ನೆಗೆತ ಶುರುವಾಯಿತು. ಸಾಲು ಸಾಲು ಕನ್ನಡ ಚಿತ್ರಗಳಲ್ಲಿ ಅವರು ಅಭಿನಯಿಸಿದರು. ಗಂಧದ ಕುಡಿ ಮೊದಲ ಚಿತ್ರವಾದರೆ, ಇತ್ತೀಚಿಗೆ ದೇಶದಾದ್ಯಂತ ಸೂಪರ್ ಡೂಪರ್ ಹಿಟ್ ಆದ ‘ಸು ಫ್ರಮ್ ಸೋ’ ಚಿತ್ರದ ಮೂಲಕ ಅವರ ಖ್ಯಾತಿ ಮತ್ತಷ್ಟು ಏರಿತು. ಜ್ಯೋತಿಯವರು ಎಲ್ಲಾ ವಿಭಾಗಕ್ಕೂ, ಪಾತ್ರಕ್ಕೂ ಸೈ ಅನ್ನುವ ನಿರ್ಧಾರವನ್ನು ಜನತೆಯ ಜತೆ ನಿರ್ದೇಶಕರುಗಳು ಕೂಡಾ ಅರ್ಥ ಮಾಡಿಕೊಂಡಿದ್ದರು.
*ಬಾಕ್ಸ್*
*ಅಭಿನಯಿಸಿದ ಚಲನಚಿತ್ರ*
1. ಗಂಧದ ಕುಡಿ
2. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು
3. ಇಂಗ್ಲಿಷ್ (ತುಳು ಚಲನಚಿತ್ರ)
4. ನಾನ್ ವೆಜ್ (ತುಳು ಚಲನಚಿತ್ರ)
5. ನಂಬರ್ ಪ್ಲೇಟ್
6. ಸು ಫ್ರಮ್ ಸೋ (ನಿರ್ದೇಶನ ರಾಜ್ ಬಿ.ಶೆಟ್ಟಿ)
7. ವಿಲೇಜ್ ಬಾಯ್ಸ್
8. ಪುಲಿ ಅಡರ್
*ಸಂದ ಪ್ರಶಸ್ತಿಗಳು*
ಕಲೆ ಪ್ರಯತ್ನ ಪರಿಶ್ರಮದ ಹಿಂದೆಯೇ ಖ್ಯಾತಿ, ಅದರ ಬೆನ್ನಲ್ಲೇ ಇವರಿಗೆ ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ. *ನಮ್ಮ ಟಿವಿ ಚಾನೆಲ್ ನಲ್ಲಿ ಬಲೆ ತೆಲಿಪಾಲೆ, ಮಕ್ಕರ್ ಟೀಂ ಪುತ್ತೂರಿನ ಜೊತೆ ಭಾಗವಹಿಸಿ ಹಾಗೂ ‘ನಮ್ಮ ತೆಲಿಪುಗ’ ಸ್ಪರ್ಧೆಯಲ್ಲಿ ಬಂಗಾರ್ ಕಲಾವಿದೆರ್ ಬಿ.ಸಿ.ರೋಡು ತಂಡದಲ್ಲಿ ಭಾಗವಹಿಸುವಿಕೆ, ವೈಷ್ಣವಿ ಕಲಾವಿದರು ತಂಡದಲ್ಲಿ ನಟನೆ ಅವರನ್ನು ಕಲಾಭಿಮಾನಿಗಳಿಗೆ ಇನ್ನಷ್ಟು ಹತ್ತಿರ ತಂದಿತ್ತು.
ಪ್ರಶಸ್ತಿ ಸನ್ಮಾನ
ಕುಂಭ ಕರಾವಳಿ “ಉತ್ತಮ ನಟಿ ಪ್ರಶಸ್ತಿ”
ಮ್ಯಾಕ್ಸ್ ಲೈಫ್ ಇನ್ಸುರೆನ್ಸ್ ನವರು “ಕಲಾ ರತ್ನ ಪ್ರಶಸ್ತಿ”
ಕುಲಾಲ ಸಂಭ್ರಮ ಪೆರ್ಡೂರು, ಉಡುಪಿ ಜಿಲ್ಲೆಯಲ್ಲಿ ಸನ್ಮಾನ
ವೀರನಾರಾಯಣ ದೇವಸ್ಥಾನ ಕುಲಶೇಖರದಲ್ಲಿ ಸನ್ಮಾನ
ಕುಲಾಲ್ ಕುಂಬಾರ ವೇದಿಕೆ ದಾಸ್ ಚಾರಿ ಟೇಬಲ್ ಟ್ರಸ್ಟ್ ಮಂಗಳೂರು ಸನ್ಮಾನ
ಹಲವಾರು ಇತರ ವೇದಿಕೆಗಳಲ್ಲಿ ಉತ್ತಮ ಹಾಸ್ಯ ನಟಿ ಪ್ರಶಸ್ತಿ ಗೌರವಗಳು ಇವರಿಗೆ ಸಂದಿವೆ.
ಬೆಳೆಸಿದವರನ್ನು ನೆನೆಸಿಕೊಂಡ ಕ್ಷಣ
ಇವರ ನಾಟಕಕ್ಕೆ ಪ್ರೇರಣೆ ತಂದೆ ದಿ| ಕೃಷ್ಣಪ್ಪ ಕುಲಾಲ್
ಮಾರ್ಗದರ್ಶಕರು ಚಾ ಪರ್ಕ ಕಲಾವಿದರು, ಮಂಗಳೂರು ತಂಡದ ಹಿರಿಯ ಕಲಾವಿದ ರಮಾ ಬಿ.ಸಿ.ರೋಡು.
ಹಾಗೆಯೇ ತನ್ನನ್ನು ಬೆಳೆಸಿದ ದಯಾನಂದ ರೈ, ರವಿ ರಾಮಕುಂಜ, ರಾಘವೇಂದ್ರ ಕಾರಂತ್ ಇವರ ಸಂಪೂರ್ಣ ಸಹಕಾರ ಮತ್ತು ಬೆಂಬಲದಿಂದ ನಾನು ಕಲಾ ರಂಗಭೂಮಿಯಲ್ಲಿ ಈ ಮಟ್ಟಕ್ಕೆ ಬೆಳೆಯಲು ಕಾರಣ ಎಂದು ಹೆಮ್ಮೆಯಿಂದ ನುಡಿಯುತ್ತಾರೆ ಜ್ಯೋತಿ ಕುಲಾಲ್ ಪುತ್ತೂರು. ಸದ್ಯಕ್ಕೆ ಅವರು ತಾಂಬೂಲ ಕಲಾವಿದರು ತಂಡದೊಂದಿಗೆ ತಮ್ಮ ಕಲಾ ಜೀವನವನ್ನು ನಡೆಸುತ್ತಿದ್ದಾರೆ.
*ಸಂಸಾರಿಕ ಜೀವನ*
ಪುತ್ತೂರು ಬಲ್ನಾಡ್ ಪದವು ದಿ. ಕೃಷ್ಣಪ್ಪ ಕುಲಾಲ್ ಮತ್ತು ರೂಪ ಪ್ರಥಮ ಪುತ್ರಿಯಾಗಿ, 6 ಮಕ್ಕಳಲ್ಲಿ ಒಬ್ಬರಾಗಿ ಜನನ.
ರಂಗಭೂಮಿ ನಟನೆಯ ಸಿನಿಮಾ ನಿಭಾಯಿಸುತ್ತಲೇ ಸಂಸಾರದಲ್ಲಿ ಪ್ರಮುಖ ಜವಾಬ್ದಾರಿ ಹೊತ್ತುಕೊಂಡು ಇವರ ಜೀವನ ಸಾಗಿದೆ.
ಈ ತುಳು ರಂಗನಾಯಕಿಯ ಕಲಾ ಬದುಕು ಇನ್ನಷ್ಟು ಪ್ರಸಿದ್ಧಿಗೆ ಮತ್ತಷ್ಟು ಎತ್ತರಕ್ಕೆ ಸಾಗಲಿ, ಒಳ್ಳೊಳ್ಳೆಯ ಅವಕಾಶಗಳು ಅವರಿಗೆ ಒದಗಿ ಬರಲಿ ಎಂದು ಇವರ ಕಲಾಭಿಮಾನಿಗಳು ಮತ್ತು ನಮ್ಮ ಬಳಗದ ಹಾರೈಕೆ.
–ಶಶಿಧರ್ ಕೆ. ಮಡಂತ್ಯಾರ್
skulalvenur@gmail.com




