ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಅರ್ಜುನ್ ನಗರದಲ್ಲಿ ಅತ್ಯಂತ ದುರದೃಷ್ಟಕರ ಘಟನೆಯೊಂದು ನಡೆದಿದ್ದು, ಆಭರಣದ ಅಂಗಡಿಯೊಂದಕ್ಕೆ ಭೇಟಿ ನೀಡಿದ್ದ ಮಹಿಳಾ ಶಿಕ್ಷಕಿಯೊಬ್ಬರು ಕುಡಿಯುವ ನೀರು ಎಂದು ಭಾವಿಸಿ ಆಸಿಡ್ ಸೇವಿಸಿದ ಘಟನೆ ನಡೆದಿದೆ. ಸದ್ಯ ಅವರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
Sponsoredಶುಕ್ರವಾರ ಸಂಜೆ ಶಿಕ್ಷಕಿಯೊಬ್ಬರು ತಮ್ಮ ತಾಯಿಯೊಂದಿಗೆ ಅರ್ಜುನ್ ನಗರದ ಆಭರಣ ಅಂಗಡಿಗೆ ಒಂದಕ್ಕೆ ಚಿನ್ನ ಖರೀದಿಸಲು ಬಂದಿದ್ದರು. ಈ ವೇಳೆ ಅವರು ಕುಡಿಯಲು ನೀರು ಕೇಳಿದ್ದಾರೆ. ತಕ್ಷಣವೇ ಅಂಗಡಿಯ ಮಾಲೀಕರು ಪಕ್ಕದ ಬೇಕರಿಯಿಂದ ನೀರಿನ ಬಾಟಲಿ ತರುವಂತೆ ತಮ್ಮ ಸಹಾಯಕನಿಗೆ ಸೂಚಿಸಿದ್ದಾರೆ. ಸಹಾಯಕ ತಂದುಕೊಟ್ಟ ಬಳಿಕ ಆ ಬಾಟಲಿಯಲ್ಲಿದ್ದ ದ್ರವವನ್ನು ಕುಡಿದ ಕೆಲವೇ ಸೆಕೆಂಡುಗಳಲ್ಲಿ ಶಿಕ್ಷಕಿಗೆ ಗಂಟಲಿನಲ್ಲಿ ತೀವ್ರ ಉರಿ ಕಾಣಿಸಿಕೊಂಡಿದೆ. ತಕ್ಷಣವೇ ಅವರು ಗಾಬರಿಯಿಂದ ಅಂಗಡಿಯಿಂದ ಹೊರಗೆ ಓಡಿದ್ದಾರೆ. ಏನಾಗುತ್ತಿದೆ ಎಂದು ತಿಳಿಯದ ತಾಯಿ ಮತ್ತು ಅಂಗಡಿ ಮಾಲೀಕರು ತಬ್ಬಿಬ್ಬಾಗಿ ಅವರ ಹಿಂದೆಯೇ ಓಡಿದ್ದಾರೆ.
ಆಸಿಡ್ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದ ಶಿಕ್ಷಕಿಯನ್ನು ಕುಟುಂಬಸ್ಥರು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮೀರತ್ ನಗರದ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಶಿಕ್ಷಕಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಆಭರಣಗಳನ್ನು ಸ್ವಚ್ಛಗೊಳಿಸಲು ಅಂಗಡಿಗಳಲ್ಲಿ ಆಸಿಡ್ ಬಳಸುವುದರಿಂದ, ನೀರಿನ ಬಾಟಲಿ ಮತ್ತು ಆಸಿಡ್ ಬಾಟಲಿ ಅದಲು ಬದಲಾಗಿ ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.




