ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮುಡಿಗೇರಿದ್ದು, ಕನ್ನಡಿಗರೆಲ್ಲರೂ ಹೆಮ್ಮೆ ಪಡುವಂತಾಗಿದೆ. ಇದರ ಬೆನ್ನಲ್ಲೇ ಖ್ಯಾತ ನಟ ಅನಂತನಾಗ್ ಅವರ ಕುರಿತು ಹಾಗೂ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಕುರಿತು ಅನೇಕ ಆಸಕ್ತಕರ ವಿಚಾರಗಳು ದಿನೇ ದಿನೇ ಪ್ರಕಟಗೊಳ್ಳುತ್ತಿವೆ.
ಸದ್ಯ ಎಲ್ಲರಲ್ಲೂ ಕಾಡುತ್ತಿರುವ ಪ್ರಶ್ನೆ ಏನೆಂದರೆ ಭಾರತೀಯ ಚಿತ್ರರಂಗದಲ್ಲೇ ಅತ್ಯುನ್ನತ ಗೌರವ ಎಂದು ಪರಿಗಣಿಸಲ್ಪಟ್ಟಿರುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯ ವಿಶೇಷತೆ ಏನು, ಈ ಪ್ರಶಸ್ತಿಗೆ ಎಷ್ಟು ಹಣ ಸಿಗುತ್ತದೆ ಎಂಬುದು. ಅದಕ್ಕೆ ಇಲ್ಲಿದೆ ನೋಡಿ ಉತ್ತರ.
ಎಷ್ಟು ಹಣ ಸಿಗುತ್ತೆ?
ಇದೇ 22ರಂದು ಗುಜರಾತ್ನ ಏಕ್ತಾ ನಗರದಲ್ಲಿ ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧಿಕೃತವಾಗಿ ಸ್ವೀಕರಿಸಲಿದ್ದಾರೆ. ಅಂದಹಾಗೆ ಫಾಲ್ಕೆ ಪ್ರಶಸ್ತಿ ಪುರಸ್ಕೃತರಿಗೆ 15 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಇಲ್ಲಿಯವರೆಗೆ 10 ಲಕ್ಷ ರೂ. ಬಹುಮಾನವಿತ್ತು. ಅದನ್ನು 15 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ಕುತೂಹಲದ ಸಂಗತಿಯೆಂದರೆ ಇದಕ್ಕೆ ತೆರಿಗೆ ಇಲ್ಲ. ಸಂಪೂರ್ಣ ಮೊತ್ತ ಪುರಸ್ಕೃತರ ಕೈ ಸೇರಲಿದೆ.
ಪ್ರಶಸ್ತಿ ವಿಶೇಷತೆ :
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯು ಭಾರತೀಯ ಚಿತ್ರರಂಗದಲ್ಲಿ ನೀಡಲಾಗುವ ಅತ್ಯುನ್ನತ ಮತ್ತು ಅತ್ಯಂತ ಪ್ರತಿಷ್ಠಿತ ಗೌರವ. ಇದು ಕೇವಲ ಒಂದು ವರ್ಷದ ಅತ್ಯುತ್ತಮ ಚಿತ್ರ ಅಥವಾ ನಟನೆಗೆ ನೀಡುವ ಪ್ರಶಸ್ತಿಯಲ್ಲ, ಬದಲಾಗಿ ಭಾರತೀಯ ಸಿನಿಮಾದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಸಾಧಕರಿಗೆ ನೀಡುವ ಜೀವಮಾನ ಸಾಧನೆ ಪ್ರಶಸ್ತಿ.
ಭಾರತೀಯ ಚಿತ್ರರಂಗದ ಪಿತಾಮಹ ಎಂದೇ ಖ್ಯಾತರಾದ ಧುಂಡಿರಾಜ್ ಗೋವಿಂದ್ ಫಾಲ್ಕೆ (1870-1944) ಅವರ ಗೌರವಾರ್ಥವಾಗಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಅವರು 1913ರಲ್ಲಿ ಭಾರತದ ಮೊದಲ ಪೂರ್ಣ ಪ್ರಮಾಣದ ಮೂಕಿ ಚಿತ್ರ ‘ರಾಜಾ ಹರಿಶ್ಚಂದ್ರ’ವನ್ನು ನಿರ್ಮಿಸಿದರು. ಅವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಭಾರತ ಸರ್ಕಾರವು 1969ರಲ್ಲಿ ಈ ಪ್ರಶಸ್ತಿಯನ್ನು ಆರಂಭಿಸಿತು.



