ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದ್ದು, ಪ್ರಕರಣದ ಮರುತನಿಖೆಗೆ ಆದೇಶಿಸಿ ಮೂರು ತಿಂಗಳ ಗಡುವು ನೀಡಿದೆ.
ಪ್ರಕರಣದ ತನಿಖೆ ನಡೆಸಿದ್ದ ಕೇಂದ್ರ ತನಿಖಾ ದಳ (ಸಿಬಿಐ), ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಹೀಗಾಗಿ, ಸೌಜನ್ಯಾ ತಾಯಿ ಕುಸುಮಾವತಿ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಮರುತನಿಖೆಗೆ ಮನವಿ ಮಾಡಿದ್ದ ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಆ ಬಳಿಕ ಅವರು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಕಳಪೆ ಹಾಗೂ ಸ್ವತಂತ್ರವಲ್ಲದ ಪರಾವಲಂಬಿ ತನಿಖೆ ನಡೆಸಲಾಗಿದೆ ಎಂದು ಸಿಬಿಐಗೆ ಜುಲೈನಲ್ಲಿ ತರಾಟೆ ತೆಗೆದುಕೊಂಡಿದ್ದ ಕೋರ್ಟ್, ತೀರ್ಪನ್ನು ಕಾಯ್ದಿರಿಸಿತ್ತು.
ಇದೀಗ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಸಂಜೀವ್ ಸಚ್‌ದೇವ್ ಅವರಿದ್ದ ಪೀಠವು ಅರ್ಜಿಯನ್ನು ವಿಚಾರಣೆ ನಡೆಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸಿಬಿಐ ನಡೆಸಿದ ತನಿಖೆಯಲ್ಲಿ ಸ್ವತಂತ್ರತೆ ಕೊರತೆಯಿದ್ದು, ಕಳಪೆ ಮಟ್ಟದ ತನಿಖೆಯಾಗಿದೆ ಎಂದು ಅಭಿಪ್ರಾಯಪಟ್ಟು, ಸೌಜನ್ಯಾ ಪ್ರಕರಣದ ಸಂಪೂರ್ಣ ಮರುತನಿಖೆ ನಡೆಸಿ ಮುಂದಿನ 3 ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಆದೇಶಿಸಿದೆ.



