ಮದುವೆಯ ಕೊನೆ ಕ್ಷಣದಲ್ಲಿ ಕೈಕೊಟ್ಟ ವಧು, ಬೇರೆ ಯುವತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರ
ಗದಗ: ಸೋಮವಾರ ನಿಗದಿಯಾಗಿದ್ದ ಮುಹೂರ್ತದಲ್ಲಿ ಮದುವೆಯಾಗಬೇಕಿದ್ದ ವಧು ಕೊನೆ ಕ್ಷಣದಲ್ಲಿ ಮದುವೆ ನಿರಾಕರಣೆ ಮಾಡಿದ್ದರಿಂದ ಅದೇ ಮುಹೂರ್ತದಲ್ಲಿ ಬೇರೆ ಯುವತಿ ಜೊತೆ ಮದುವೆ ನೆರವೇರಿರುವ ಘಟನೆ ನಡೆದಿದೆ. ವೈಯಕ್ತಿಕ ಕಾರಣದಿಂದ ಶನಿವಾರ ರಾತ್ರಿ ಯುವತಿ ಏಕಾಏಕಿ ಮದುವೆಗೆ ನಿರಾಕರಣೆ ಮಾಡಿದ್ದಾಳೆ. ಈ ಕುರಿತು ಯುವತಿಯ ಪೋಷಕರು ಲಿಖಿತ ಮುಚ್ಚಳಿಕೆ ಪತ್ರವನ್ನು ಬರೆದು ಕೊಟ್ಟಿದ್ದಾರೆ. ಆದರೆ ವರನ ಪೋಷಕರಿಗೆ ಇದು ಶಾಕ್ ನೀಡಿದೆ. ಮದುವೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡು ಕೊನೆ ಕ್ಷಣದಲ್ಲಿ ಮದುವೆ ನಿಲ್ಲಿಸುವುದು ಸರಿಯೇ ಎಂದು ಚಿಂತಾಕ್ರಾಂತರಾಗಿದ್ದಾರೆ.
Sponsoredಕೊನೆಗೆ ಹಿರಿಯರೆಲ್ಲ ಸೇರಿ ಮದುವೆ ನಿಲ್ಲಿಸುವುದು ಬೇಡ ಎಂದು ವರನ ಪೋಷಕರಿಗೆ ಧೈರ್ಯ ಹೇಳಿ ಬೇರೆ ಯುವತಿ ಹುಡುಕಾಟ ಮಾಡಿದ್ದಾರೆ. ರಾಮದುರ್ಗ ತಾಲೂಕಿನ ಕೆ ಚಂದರಗಿ ಗ್ರಾಮದ ಯುವತಿ ಆಕೆಯ ತಂದೆ ತಾಯಿಗೆ ನಡೆದ ಘಟನೆ ಕುರಿತು ಮನವರಿಕೆ ಮಾಡಿಕೊಟ್ಟು ಅವರ ಒಪ್ಪಿಗೆ ಪಡೆದು ಸೋಮವಾರ ನಿಗದಿ ಮಾಡಲಾಗಿದ್ದ ಮುಹೂರ್ತದಲ್ಲಿಯೇ ಮದುವೆ ಮಾಡಲಾಗಿದೆ.




