ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಗೂ ಅವರ ಪತ್ನಿ ಪಾಯಲ್ ಅಬ್ದುಲ್ಲಾ ಅವರಿಗೆ ಸುಪ್ರೀಂ ಕೋರ್ಟ್ ವಿಚ್ಛೇದನ ಮಂಜೂರು ಮಾಡಿದೆ.
Sponsoredಈ ದಂಪತಿ ಹಲವು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಪರಸ್ಪರ ಸಮ್ಮತಿಯೊಂದಿಗೆ ವಿಚ್ಛೇದನ ಪಡೆಯಲು ನಿರ್ಧರಿಸಿದ್ದರು. ಹೀಗಾಗಿ ಬಾಕಿ ಇರುವ ಎಲ್ಲಾ ಕೌಟುಂಬಿಕ ವಿವಾದಗಳನ್ನು ಇತ್ಯರ್ಥಪಡಿಸಿಕೊಳ್ಳಲು ಒಪ್ಪಿಕೊಂಡ ನಂತರ ನ್ಯಾಯಾಲಯ ಈ ಆದೇಶ ನೀಡಿದೆ.
ಒಮರ್ ಅಬ್ದುಲ್ಲಾ ಅವರು ತಮ್ಮ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿದ್ದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ವೇಳೆ, ದಂಪತಿಗಳು ಮಧ್ಯಸ್ಥಿಕೆಯ ಮೂಲಕ ಪರಸ್ಪರ ಮಾತುಕತೆ ನಡೆಸಿ, ಕೌಟುಂಬಿಕ ವ್ಯಾಜ್ಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ನಿರ್ಧರಿಸಿದ್ದರು.
ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ, ಒಮರ್ ಅಬ್ದುಲ್ಲಾ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, “ಇಬ್ಬರೂ ಸಮ್ಮತಿಯಿಂದ ಬೇರ್ಪಡಲು ನಿರ್ಧರಿಸಿದ್ದು, ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲಿದ್ದಾರೆ. ಸಂವಿಧಾನದ ವಿಧಿ 142ರ ಅಡಿಯಲ್ಲಿ ವಿಚ್ಛೇದನ ಮಂಜೂರು ಮಾಡಬೇಕು” ಎಂದು ಮನವಿ ಮಾಡಿದರು. ಹೀಗಾಗಿ ಕೋರ್ಟ್ ಈ ಇಬ್ಬರಿಗೂ ವಿಚ್ಛೇದನ ನೀಡಿದೆ.




