ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ CWRC, CWMA ಆದೇಶ ವಿರೋಧಿಸಿ ರಾಜ್ಯದಲ್ಲಿ ಭುಗಿಲೆದ್ದಿರುವ ರೈತರ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಕನ್ನಡ ಪರ ಸಂಘಟನೆಗಳು ಹಾಗೂ ರೈತಸಂಘಟನೆಗಳು ಮುಂದಾಗಿದ್ದು, ಆಗಸ್ಟ್ 13 ರಂದು ಅಖಂಡ ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ.
Sponsoredಹೌದು, ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಆಕ್ರೋಶ ಮುಗಿಲುಮುಟ್ಟಿದ್ದು, ಇದರ ಬೆನ್ನಲ್ಲೇ ಕನ್ನಡಪರ ಸಂಘಟನೆಗಳು ಬೃಹತ್ ಹೋರಾಟಕ್ಕೆ ಕರೆ ನೀಡಿವೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕನ್ನಡ ಒಕ್ಕೂಟದ ಅಧ್ಯಕ್ಷ ಹಾಗೂ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಪ್ರಮುಖರ ಸಭೆ ನಡೆದಿದೆ. ಈ ಸಭೆಯಲ್ಲಿ ಕಾವೇರಿ ಜಲವಿವಾದದ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದ್ದು, ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಆಗಸ್ಟ್ 13 ರಂದು ‘ಕರ್ನಾಟಕ ಬಂದ್’ ನಡೆಸಲು ಅಧಿಕೃತವಾಗಿ ನಿರ್ಧಾರ ಕೈಗೊಳ್ಳಲಾಗಿದೆ.
ಕನ್ನಡಿಗರು ಯಾರು ವಿರೋಧ ಮಾಡದೇ, ನೈತಿಕ ಬೆಂಬಲ ಎನ್ನದೇ ಸಂಪೂರ್ಣ ಬೆಂಬಲ ಕೊಡಬೇಕು. ಆಸ್ಪತ್ರೆ, ಅಂಬುಲೆನ್ಸ್‌ಗೆ ವಿನಾಯಿತಿ ಇದೆ. ಇನ್ನುಳಿದಂತೆ ಸಂಪೂರ್ಣ ಬೆಂಬಲ ಕೊಡಬೇಕು. ರೈತರು ಭಾಗವಹಿಸಬೇಕು. ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿ ಸಂಪೂರ್ಣ ಬೆಂಬಲ ನೀಡಿದೆ, ರಾಜ್ಯ ಸರ್ಕಾರಿನೌಕರರು, ಕಾರ್ಮಿಕರು ಹೋಟೆಲ್ ಸಂಘ, ಎಪಿಎಂಸಿ, ಲಾರಿ ಮಾಲೀಕರು ಆಟೋ ಚಾಲಕರು ಎಲ್ಲರೂ ಬಂದ್‌ಗೆ ಬೆಂಬಲ ಕೊಡ್ತಾರೆ. ಎಲ್ಲರಿಗೂ ಗಂಭೀರವಾಗಿ ಬಂದ್‌ಗೆ ಬೆಂಬಲ ಕೊಡಲು ಕೇಳ್ತಾ ಇದ್ದೇವೆ. ಮಾಲ್‌ಗಳು ಚಿತ್ರ ಮಂದಿರಗಳು, ಬಸ್ ಮಾಲೀಕರು ಎಲ್ಲರ ಜೊತೆಗೂ ಮಾತಾನಾಡಿ ಬಂದ್‌ಗೆ ಬೆಂಬಲ ಕೋರುತ್ತೇವೆ. ಒಲಾ ಉಬರ್ ಎಲ್ಲವೂ ಬಂದ್ ಆಗುತ್ತೆ ಎಂದರಲ್ಲದೇ ವಿಮಾನಗಳೂ ಕೂಡ ನಿಲ್ಲಬೇಕು ಎಂದು ಒತ್ತಾಯಿಸಿದ್ದಾರೆ
ಒಟ್ಟಾರೆ ಆಗಸ್ಟ್ 13 ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್‌ಗೆ ರಾಜ್ಯದ ಎಲ್ಲಾ ವ್ಯಾಪಾರಸ್ಥರು, ಸಾರಿಗೆ ಸಂಸ್ಥೆಗಳು, ರೈತ ಸಂಘಟನೆಗಳು ಹಾಗೂ ಸಾರ್ವಜನಿಕರು ಸಂಪೂರ್ಣ ಬೆಂಬಲ ನೀಡಬೇಕೆಂದು ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ. ಕಾವೇರಿ ಕಾವಲು ಪಡೆ ಮತ್ತು ಕನ್ನಡಪರ ಒಕ್ಕೂಟಗಳು ಮುಂಬರುವ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ತೀರ್ಮಾನಿಸಿವೆ.




