ಶನಿವಾರ, 24 ಅಕ್ಟೋಬರ್ 2026

ಸುಳ್ಯ : ಕಾಡಾನೆ ಓಡಿಸಲು ಗಾಳಿಯಲ್ಲಿ ಗುಂಡು ಹಾರಿಸಿದ ಅರಣ್ಯ ಸಿಬ್ಬಂದಿ – ಗುಂಡಿನ ಚೂರು ತಗುಲಿ ಸ್ಕೂಟರ್ ಸವಾರನಿಗೆ ಗಾಯ

ಕಾಡಾನೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಹಾರಿಸಿದ ಗುಂಡಿನ ಚೂರುಗಳು ತಗುಲಿ ಸ್ಕೂಟರ್ ಸವಾರರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಐವರ್ನಾಡು ಗ್ರಾಮದ ಬೆಂಗಮಲೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಪೆರುವಾಜೆ ಗ್ರಾಮದ ಯೇನಡ್ಕ ನಿವಾಸಿ ಎ. ರಾಘವ ಪ್ರಭು ಗಾಯಗೊಂಡ ಸ್ಕೂಟರ್ ಸವಾರ. ಪ್ರಸ್ತುತ ಅವರು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಚಿಕಿತ್ಸಾ ವೆಚ್ಚವನ್ನು ಅರಣ್ಯ ಇಲಾಖೆಯೇ ಭರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. 

ಆಗಸ್ಟ್ 12 ರಂದು ಸಂಜೆ 7:30 ರ ಸುಮಾರಿಗೆ ಈ ಘಟನೆ ನಡೆದಿದೆ. ಅಂದು ರಾಘವ ಪ್ರಭು ಅವರು ಬ್ಯಾಂಕ್ ಕೆಲಸ ಮುಗಿಸಿಕೊಂಡು ಸ್ಕೂಟರ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ಬೆಂಗಮಲೆ ತಲುಪಿದಾಗ ಕಾಡಾನೆಯೊಂದು ರಸ್ತೆ ದಾಟುತ್ತಿರುವುದು ಕಂಡುಬಂದಿದೆ. ತಕ್ಷಣ ಅವರು ತಮ್ಮ ಸ್ಕೂಟರ್ ಅನ್ನು ಸುಳ್ಯದ ಕಡೆಗೆ ತಿರುಗಿಸಿದ್ದಾರೆ. ಅದೇ ಸಮಯದಲ್ಲಿ ಸ್ಥಳದಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನು ಓಡಿಸಲು ಹಾರಿಸಿದ ಗುಂಡಿನ ಚೂರುಗಳು ಪ್ರಭು ಅವರ ಕಾಲಿಗೆ ತಗುಲಿವೆ.

ಗಾಯಗೊಂಡ ಪ್ರಭು ಅವರು ಸಿಬ್ಬಂದಿಗೆ ಗಾಯವನ್ನು ತೋರಿಸಿದರೂ, ‘ಏನೂ ಆಗಿಲ್ಲ’ ಎಂದು ಹೇಳಿ ಕಳುಹಿಸಿದ್ದರು. ಮರುದಿನ ನೋವು ಹೆಚ್ಚಾದ ಕಾರಣ ಆಸ್ಪತ್ರೆಗೆ ದಾಖಲಾದಾಗ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಕಾಲಿನಲ್ಲಿದ್ದ ಗುಂಡಿನ ಚೂರುಗಳನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಕಾಡುಪ್ರಾಣಿ ಓಡಿಸಲು ಗುಂಡು ಹಾರಿಸುವ ಮುನ್ನ ಸಾರ್ವಜನಿಕರಿಗೆ ಎಚ್ಚರಿಕೆ ನೀಡಬೇಕಿತ್ತು. ರಸ್ತೆಯ ಎರಡೂ ಬದಿಗಳಲ್ಲಿ ಸಂಚಾರ ತಡೆದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ” ಎಂದು ರಾಘವ ಪ್ರಭು ಆಕ್ರೋಶ ವ್ಯಕ್ತಪಡಿಸಿದ್ದಾರೆ.