ಶನಿವಾರ, 24 ಅಕ್ಟೋಬರ್ 2026

ಬಿಸಿಲಿನ ತಾಪಕ್ಕೆ ಕಾರೊಳಗಿದ್ದ ಅಕ್ಕ- ತಂಗಿ ಸಾವು!!

ಲಾಕ್ ಆಗಿದ್ದ ಕಾರಿನೊಳಗೆ ತಾಪಮಾನ ಬರೋಬ್ಬರಿ 53 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾದ ಪರಿಣಾಮ, ಆಟವಾಡುತ್ತಿದ್ದ ಇಬ್ಬರು ಬಾಲಕಿಯರು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದಿದೆ.

ಟೀನಾ (8) ಮತ್ತು ಲಕ್ಷ್ಮಿ (5) ಮೃತಪಟ್ಟ ಬಾಲಕಿಯರು. ವೈಶಾಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖುದನ್‌ಪುರಿ ಪ್ರದೇಶದಲ್ಲಿ, ತಾಂತ್ರಿಕ ದೋಷದಿಂದಾಗಿ (ಎಂಜಿನ್ ಮತ್ತು ಬ್ಯಾಟರಿ ಸಮಸ್ಯೆ) ಸುಮಾರು 10 ದಿನಗಳಿಂದ ಗ್ಯಾರೇಜ್‌ನ ಬಳಿ ನಿಲ್ಲಿಸಲಾಗಿದ್ದ ಕಾರಿನೊಳಗೆ ಆಟವಾಡುತ್ತಿದ್ದಾಗ ಈ ಸಹೋದರಿಯರು ಒಳಹೋಗಿದ್ದಾರೆ. ಕಾರು ಲಾಕ್ ಆಗಿದ್ದರಿಂದ ಒಳಗಿನಿಂದ ಹೊರಬರಲು ಸಾಧ್ಯವಾಗದೆ ಅವರು ಅದರಲ್ಲಿಯೇ ಸಿಲುಕಿಕೊಂಡಿದ್ದಾರೆ.

ಸುಮಾರು 11 ರಿಂದ 11:30 ರ ನಡುವೆ ನಡೆದ ಈ ಘಟನೆಯ ವೇಳೆ, ಹೊರಗಿನ ಉಷ್ಣಾಂಶ ಸುಮಾರು 43°C ಇತ್ತು. ಆದರೆ, ಮುಚ್ಚಿದ ಕಾರಿನ ಒಳಗಿನ ತಾಪಮಾನವು ಸುಮಾರು 53°C ತಲುಪಿತ್ತು. ಆಗ ಸ್ಥಳೀಯರು ಕಾರಿನ ಬಾಗಿಲು ತೆರೆದು ಮಕ್ಕಳನ್ನು ಹೊರತೆಗೆದಾಗ, ಅವರ ದೇಹದ ಸ್ಥಿತಿಯನ್ನು ನೋಡಿ ಅಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ.

ಸಮೀಪದ ಗ್ಯಾರೇಜ್‌ನ ಕಾರ್ಮಿಕನೊಬ್ಬ ಹೇಳುವಂತೆ, “ಅತಿಯಾದ ಬಿಸಿಲಿನಿಂದಾಗಿ ಬಾಲಕಿಯರ ಕೈಕಾಲುಗಳು ಹಿಂಡಿದಂತಾಗಿದ್ದವು. ಅವರ ಮೈ ಅತಿಯಾದ ಬಿಸಿಯಾಗಿತ್ತು, ಚರ್ಮ ಸುಟ್ಟ ಗಾಯಗಳಂತಾಗಿತ್ತು.” ಎಂದು ವಿವರಿಸಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.