ಉಜಿರೆ,ದಿ.ಜು.01 : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗದ ವತಿಯಿಂದ ರಾಷ್ಟ್ರೀಯ
Sponsoredವೈದ್ಯರ ದಿನಾಚರಣೆಯ ಅಂಗವಾಗಿ 55 ಕ್ಕೂ ಹೆಚ್ಚಿನ ಜನ ವೈದ್ಯರುಗಳಿಗೆ ವಿದ್ಯಾರ್ಥಿಗಳು ಉಜಿರೆಯ ವಿವಿಧ ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳಿಗೆ ಭೇಟಿ ಗೌರವಿಸುವುದರ ಮೂಲಕ ವಿಶೇಷವಾಗಿ ಆಚರಿಸಲಾಯಿತು.
ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗದ 17 ಜನ ವಿದ್ಯಾರ್ಥಿಗಳ ತಂಡವು ಉಜಿರೆಯ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಎಸ್.ಡಿ.ಎಂ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ, ಬೆನಕ ಆಸ್ಪತ್ರೆ , ಉಜಿರೆಯ ಸರ್ಕಾರಿ ಆಸ್ಪತ್ರೆ, ಹಾಗೂ ಉಜಿರೆಯ ವಿವಿಧ ಖಾಸಗಿ ಚಿಕಿತ್ಸಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರುಗಳನ್ನು ಸಂಪರ್ಕಿಸಿ ಸಮಾಜದ ಆರೋಗ್ಯ ರಕ್ಷಣೆಯಲ್ಲಿ ವೈದ್ಯರು ಸಲ್ಲಿಸುತ್ತಿರುವ ಅಮೂಲ್ಯ ಸೇವೆಯನ್ನು ಸ್ಮರಿಸಿ, ವೈದ್ಯರ ದಿನದ ಶುಭಾಶಯಗಳನ್ನು ಕೋರಿದರು. ಅವರ ನಿರಂತರ ನಿಸ್ವಾರ್ಥ ಸೇವೆಗೆ ಕೃತಜ್ಞತೆ ಸಲ್ಲಿಸಿದರು.
ವಿದ್ಯಾರ್ಥಿಗಳ ಈ ವಿನೂತನ ಅಭಿಯಾನವು ವೈದ್ಯಕೀಯ ವೃತ್ತಿಯ ಮಹತ್ವವನ್ನು ಗೌರವಿಸುವ ಮನೋಭಾವವನ್ನು ಬೆಳೆಸುವುದರ ಜೊತೆಗೆ ಸಮಾಜ ಸೇವೆಯ ಮೌಲ್ಯವನ್ನು ಅರಿಯುವ ಅವಕಾಶವನ್ನು ಒದಗಿಸಿತು. ವೈದ್ಯರು ವಿದ್ಯಾರ್ಥಿಗಳ ಶುಭಾಶಯಗಳನ್ನು ಹರ್ಷದಿಂದ ಸ್ವೀಕರಿಸಿ, ಅವರ ಈ ಕೃತಜ್ಞತೆಯ ಅಭಿವ್ಯಕ್ತಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಮಾನವೀಯ ಮೌಲ್ಯಗಳು ಹಾಗೂ ಸಮಾಜದ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು.
ಸಮಾಜದ ಆರೋಗ್ಯ ಮತ್ತು ಮಾನವ ಜೀವದ ರಕ್ಷಣೆಗೆ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡಿರುವ ವೈದ್ಯಕೀಯ ವೃತ್ತಿಪರರ ಅಮೂಲ್ಯ ಸೇವೆ, ತ್ಯಾಗ ಹಾಗೂ ಮಾನವೀಯ ಕಾಳಜಿಯನ್ನು ಗೌರವಿಸುವ ಇದೊಂದು ಮಹತ್ವದ ಆಚರಣೆ. ಪ್ರತಿವರ್ಷ ಜುಲೈ 1ರಂದು ಭಾರತದಲ್ಲಿ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ದೇಶದ ಖ್ಯಾತ ವೈದ್ಯರು, ಶಿಕ್ಷಣತಜ್ಞರು, ಸಮಾಜಸೇವಕರು ಹಾಗೂ ಶ್ರೇಷ್ಠ ರಾಜಕಾರಣಿಯಾಗಿದ್ದ ಡಾ. ಬಿಧಾನ್ ಚಂದ್ರ ರಾಯ್ ಅವರ ಜನ್ಮದಿನ ಮತ್ತು ಪುಣ್ಯತಿಥಿಯ ಸ್ಮರಣಾರ್ಥ ಆಚರಿಸಲಾಗುತ್ತದೆ. ವೈದ್ಯಕೀಯ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಅಪಾರ ಕೊಡುಗೆಗಳು ಇಂದಿಗೂ ಎಲ್ಲರಿಗೂ ಸ್ಫೂರ್ತಿದಾಯಕವಾಗಿವೆ ಎಂದು ಕಾಲೇಜಿನ ಪ್ರಾಚಾರ್ಯರಾದ ಪ್ರೋ ವಿಶ್ವನಾಥ್ ಪಿ ಅಭಿಪ್ರಾಯ ಪಟ್ಟರು.
ವಿನೂತನ ಕಾರ್ಯಕ್ರಮವನ್ನು ಸಂಯೋಜಿಸಿದ ಕಾಲೇಜಿನ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗದ ಉಪನ್ಯಾಸಕರಾದ ಶರಶ್ಚಂದ್ರ ಕೆ ಎಸ್ ಮಾತನಾಡಿ, ಈ ವಿಶೇಷ ದಿನದ ಅಂಗವಾಗಿ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ವೈದ್ಯರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವುದು ನಮ್ಮ ಉದ್ದೇಶವಾಗಿತ್ತು. ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವ ವೈದ್ಯರು ಸಮಾಜಕ್ಕೆ ನೀಡುತ್ತಿರುವ ಅಮೂಲ್ಯ ಸೇವೆ, ಅವರ ನಿಸ್ವಾರ್ಥ ಸಮರ್ಪಣೆ ಹಾಗೂ ಮಾನವೀಯ ಕಾಳಜಿಗೆ ಕೃತಜ್ಞತೆ ಸಲ್ಲಿಸುವ ಸಂಸ್ಕೃತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಹಾಗು ಜಾಗೃತಿಯನ್ನು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು ಎಂದರು.
ಕಾರ್ಯಕ್ರಮದಲ್ಲಿ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗದ ಮುಖ್ಯಸ್ಥೆ ಶಕುಂತಲಾ, ಉಪನ್ಯಾಸಕ ಶ್ರೇಯಸ್ ಬಿ, ಗುರುರಾಜ್ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.




